ಭಾರತೀಯ ಸಂವಿಧಾನಕ್ಕೆ ಸಾರ್ವಕಾಲಿಕ ಅಸ್ತಿತ್ವ: ಜಮೀರ್ ಅಹ್ಮದ್‌

| Published : Feb 21 2024, 02:06 AM IST

ಭಾರತೀಯ ಸಂವಿಧಾನಕ್ಕೆ ಸಾರ್ವಕಾಲಿಕ ಅಸ್ತಿತ್ವ: ಜಮೀರ್ ಅಹ್ಮದ್‌
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಮೀರ್ ಅಹ್ಮದ್ ಪಾಲ್ಗೊಂಡು ಸಂವಿಧಾನದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಮುನ್ನ ಕಲಾವಿದ ನಂಜುಂಡಸ್ವಾಮಿ ಕ್ರಾಂತಿ ಗೀತೆ ಹಾಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ,ಭಾವನೆಗಳನ್ನು ಬದುಕಿನ ಅವಿಭಾಜ್ಯ ಅಂಗವಾಗಿ ಗುರುತಿಸುವ ಭಾರತೀಯ ಸಂವಿಧಾನ ಸಾರ್ವಕಾಲಿಕವಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಮೀರ್ ಅಹ್ಮದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕುಶಾಲನಗರದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಸಾರುವುದಕ್ಕಾಗಿ ಸಂವಿಧಾನ ರಚನೆ ಮಾಡಲಾಗಿದೆ ಎಂದರು.

ಇಡೀ ವಿಶ್ವಶಾಂತಿಗಾಗಿ ಘೋಷಣೆ ಮಾಡಿದ ವಿಶ್ವದ ಮೊದಲ ಸಂವಿಧಾನ ಭಾರತೀಯ ಸಂವಿಧಾನವಾಗಿದ್ದು, ಪ್ರತಿಯೊಬ್ಬರಿಗೂ ಸಾಮರಸ್ಯದ ಜೀವನ ರೂಪುಗೊಳಿಸುವ ನಿಟ್ಟಿನಲ್ಲಿ ಸಂವಿಧಾನ ರಚನೆಯಾಗಿದೆ ಎಂದು ಹೇಳಿದರು.

ಮಾತಿಗಿಂತ ಕೃತಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಯಾವುದೇ ಸಂದರ್ಭ ಜಾತಿ ಮತ ಪರಿಕಲ್ಪನೆ ಬರಬಾರದು. ಪ್ರಸಕ್ತ ದಿನಗಳಲ್ಲಿ ಮಾನವ ಮನುಷ್ಯತ್ವವನ್ನು ಮರೆತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.ಮಲೆ ಮಹದೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಮುಖ್ಯ ಭಾಷಣ ಮಾಡಿ, ಡಾ.ಬಿ.ಆರ್‌. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ಅರಿತು ಇತರರಿಗೂ ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಶಾಲನಗರ ಕಾವೇರಿ ತಾಲೂಕು ಹೋರಾಟ ಸಮಿತಿಯ ಸಂಚಾಲಕ ವಿ.ಪಿ. ಶಶಿಧರ್, ಸಂವಿಧಾನ ಜೀವ ಸಂಕುಲಗಳನ್ನು ಬದುಕು ಸಂರಕ್ಷಣೆ ಮಾಡುವ ಆಡಳಿತಾತ್ಮಕ ಕಾನೂನು ಆಗಿದ್ದು ಎಲ್ಲರೂ ಗೌರವಿಸಬೇಕಾಗಿದೆ. ಸಂವಿಧಾನವನ್ನು ನಾವು ಗೌರವಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕಿರಣ್ ಗೌರಯ್ಯ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಿದರು.

ನಂತರ ಮಾತನಾಡಿದ ಅವರು, ಸಂವಿಧಾನದ ಮಹತ್ವ ಮತ್ತು ಅದರ ಆಶಯಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ನಾಗರಿಕರು ಸಂವಿಧಾನದ ಮಹತ್ವವನ್ನು ಅರಿತು,ಅದರ ಆಶಯದಂತೆ ನಡೆದುಕೊಂಡರೆ ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಜತೆಗೆ ಸಮಾಜದಲ್ಲಿ ಶಾಂತಿ,ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ಅರಿತು ಇತರರಿಗೂ ತಿಳಿಸುವ ಮೂಲಕ ಪ್ರತಿಯೊಬ್ಬ ಭಾರತೀಯ ಪ್ರಜೆಯಲ್ಲೂ ಸಂವಿಧಾನದ ಜಾಗೃತಿ ಮೂಡಿಸಬೇಕಿದೆ ಎಂದರು.ಕಾರ್ಯಕ್ರಮಕ್ಕೆ ಮುನ್ನ ಕಲಾವಿದ ನಂಜುಂಡಸ್ವಾಮಿ ಕ್ರಾಂತಿ ಗೀತೆ ಹಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದೇಗೌಡ, ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಇ.ಒ.ಜಯಣ್ಣ, ಪುರಸಭೆ ಮುಖ್ಯಾಧಿಕಾರಿ ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿ ಕೃಷ್ಣ ಪ್ರಸಾದ್, ಆರೋಗ್ಯ ಅಧಿಕಾರಿ ಉದಯಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ, ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆಯ ಅಧಿಕಾರಿ ವಿಮಲ, ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ತಾಲೂಕು ಅಧ್ಯಕ್ಷ ನಾಗೇಶ್, ಪುರಸಭೆ ಮಾಜಿ ಅಧ್ಯಕ್ಷ ಜಯವರ್ಧನ್, ಮಾಜಿ ಉಪಾಧ್ಯಕ್ಷೆ ಸುರೆಯ್ಯ ಬಾನು, ಸದಸ್ಯರಾದ ಸುರೇಶ್, ಆನಂದ್ ಕುಮಾರ್, ಜಯಲಕ್ಷ್ಮಮ್ಮ, ಕೂಡಾ ಸದಸ್ಯ ಕಾರ್ಯದರ್ಶಿ ಸ್ವಾತಿ, ಸಾಮಾಜಿಕ ಹೋರಾಟಗಾರರಾದ ನಿರ್ವಾಣಪ್ಪ ಹೊನ್ನಪ್ಪ,ದಲಿತ ಸಂಘರ್ಷ ಸಮಿತಿ ಭೀಮ ವಾದ ಜಿಲ್ಲಾಧ್ಯಕ್ಷ ಕೆ.ಬಿ.ರಾಜು, ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ನಿರ್ವಾಣಪ್ಪ, ಅಂಬೇಡ್ಕರ್ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಜಯಪ್ರಕಾಶ್, ಸತೀಶ್, ಲೋಕೇಶ್, ವಾಲ್ಮಿಕಿ ಸಮಾಜದ ಅಧ್ಯಕ್ಷ ಅಶೋಕ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ವಿವಿಧ ಶಾಲೆಯ ಮುಖ್ಯ ಶಿಕ್ಷಕರು,ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿವಿಧ ಶಾಲೆಗಳಲ್ಲಿ ಏರ್ಪಡಿಸಿದ ಸಂವಿಧಾನ ಕುರಿತಾದ ಭಾಷಣ, ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ವಿವಿಧ ಸಂಘ- ಸಂಸ್ಥೆಗಳು ಹಾಗೂ ಪುರಸಭೆ ಸಂಯುಕ್ತ ಆಶಯದಲ್ಲಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಮುನ್ನ ಕುಶಾಲನಗರ ಗಂಧದಕೋಟಿ ಬಳಿ ಸಂವಿಧಾನ ಜಾಗೃತಿ ಜಾಥಾ ರಥವನ್ನು ಬರಮಾಡಿಕೊಳ್ಳಲಾಯಿತು