ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ
ನಾಗರಿಕ ಸೇವಾ ಕ್ಷೇತ್ರದಲ್ಲಿ ಸಹನಶೀಲತೆ ಗುಣ, ಕೆಲಸಗಳ ಒತ್ತಡಗಳ ನಡುವೆಯೂ ಮುಖದಲ್ಲಿ ಮಾಸದ ಪ್ರಸನ್ನತೆ ಮತ್ತು ಉಡಾಫೆಯಿಲ್ಲದ, ಕಾನೂನು ಪರಿಮಿತಿಯಲ್ಲಿ ಇರಬೇಕಾದ ಕಾರ್ಯ ದಕ್ಷತೆ ಇವುಗಳನ್ನು ನೌಕರರು ಅಳವಡಿಕೊಂಡಲ್ಲಿ ಆಕ್ಷೇಪ, ಜನತೆಯಿಂದ ದೂರು ಮತ್ತು ನಿಧಾನಕೆಲಸಗಳಾಗದೇ ಸತತ ಕ್ರಿಯಾಶೀಲರಾಗಲು ಸಾಧ್ಯ ಎಂಬುದಕ್ಕೆ ಕಿರಿಯ ಅಭಿಯಂತರ ಸಿದ್ದು ಬಿ. ಮಾತಾಳಿ ಮತ್ತು ಪೌರಕಾರ್ಮಿಕ ರಾಮಚಂದ್ರ ಯಲಿಕಾರ ನಿದರ್ಶನ ಎಂದು ತೇರದಾಳ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪ್ರಶಂಸಿಸಿದರು.ಪುರಸಭೆ ಅಭಿಯಂತರ ಸಿದ್ದು ಮಾತಾಳಿ ಮತ್ತು ಪೌರಕಾರ್ಮಿಕ ರಾಮಚಂದ್ರ ಯಲಿಕಾರ ನಿವೃತ್ತಿ ಕಾರಣ ಪುರಸಭೆ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪುರಸಭೆಯ ಎಲ್ಲ ವಿಭಾಗಗಳ ಕೆಲಸಗಳಲ್ಲೂ ಅನುಭವ ಹೊಂದಿದ್ದ ಮಾತಾಳಿಯವರು ಎಷ್ಟೇ ಕೆಲಸದ ಒತ್ತಡವಿದ್ದರೂ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಎಂದೂ ಸಿಡಿಮಿಡಿ ಮಾಡದೇ ಸದಾ ಸಹನೆಯಿಂದ ವ್ಯವಹರಿಸುತ್ತ, ನಾಗರಿಕ ಸಂಕಷ್ಟಗಳಿಗೆ ತಕ್ಷಣ ಮಿಡಿದು ಸಕಾಲದಲ್ಲಿ ನೆರವು ಕಲ್ಪಿಸುತ್ತಿದ್ದರು. ೩೭ ವರ್ಷಗಳ ಸುದೀರ್ಘ ಸೇವೆಯಲ್ಲಿ ತಮ್ಮದಲ್ಲದ ತಪ್ಪಿಗೆ ತೊಂದರೆ ಆದಾಗ ಯಾರನ್ನೂ ದೂಷಿಸದೆ ಸಂಯಮದಿಂದ ಸಾರ್ವಜನಿಕ ಸೇವೆ ಮಾಡಿದ್ದಾರೆಂದರು. ಪೌರಕಾರ್ಮಿಕರಾಗಿ ೩ ದಶಕ ದುಡಿದ ರಾಮಚಂದ್ರ ಯಲಿಕಾರ ಸ್ವಚ್ಛತೆ ಸೇರಿದಂತೆ ಪಟ್ಟಣದ ವಿವಿಧ ಕೆಲಸಗಳಲ್ಲಿ ಶ್ರಮಿಸಿದ್ದಾರೆಂದರು. ಮುಖ್ಯಾಧಿಕಾರಿ ಮಾಲಿನಿ ಮಾತನಾಡಿ, ಸದಾಸುಖಿ ಹಸನ್ಮುಖಿ ಎಂಬಂತಿದ್ದ ಸಿದ್ದು ಮಾತಾಳಿಯವರು ಸರಳ ಮತ್ತು ಸೌಹಾರ್ದ ವ್ಯಕ್ತಿತ್ವದಿಂದ ಎಲ್ಲ ವಿಭಾಗಗಳೊಡನೆ ಸಮನ್ವಯತೆ ಸಾಧಿಸಿ ಕೆಲಸ ಮಾಡುತ್ತಿದ್ದರು ಎಂದರು.
ಎಫ್.ಬಿ.ಗಿಡ್ಡಿ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಸುರೇಶ ಮರಡಿ, ಸಚಿನ್ ಕೊಡತೆ, ಸಿದ್ದು ಮಾತಾಳಿಯವರ ಕಾರ್ಯವೈಖರಿಯ ಬಗ್ಗೆ ಅಭಿನಂದನಾ ಪರ ಮಾತುಗಳಾಡಿದರು. ಕಿರಿಯ ಅಭಿಯಂತರೆ ಭಾಗ್ಯಶ್ರೀ ಪಾಟೀಲ, ರೂಪಾ ಗೊಂಬಿ, ಅಭಿನಂದನ ಬನ್ನಿಕೊಪ್ಪ, ಮಹಾದೇವಿ ಮರಿಗುದ್ದಿ, ಗೌರಿ ಮಾಲಾಪುರ, ಪ್ರತಾಪ ಕೊಡಗೆ, ಕಾಶಿನಾಥ ರಾಠೋಡ, ಕೇದಾರಿ ಪಾಟೀಲ, ಫಜಲ್ ಅತರಾವುತ, ಸಂಗಮೇಶ ಕಾಲತಿಪ್ಪಿ, ಸದಾಶಿವ ಹೊಸಮನಿ, ಮುರುಗೇಶ ಮಿರ್ಜಿ, ಕುಮಾರ ಸರಿಕರ, ಈಶ್ವರ ಮಠಪತಿ ಸೇರಿದಂತೆ ಗುತ್ತಿಗೆದಾರರು, ಸಿಬ್ಬಂದಿ ಮತ್ತು ನಾಗರಿಕರು ಉಪಸ್ಥಿತರಿದ್ದರು.