ಪರಿಶ್ರಮದ ಸಾಧನೆಗೆ ಶಾಶ್ವತ ಸ್ಥಾನವಿದೆ: ಸಿ.ಎಚ್. ವಿಜಯಶಂಕರ್

| Published : Oct 09 2024, 01:31 AM IST

ಸಾರಾಂಶ

ಕಾವೇರಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಲೋಹಿತ್ ಅವರ ನೇತೃತ್ವದಲ್ಲಿ ಹುಣಸೂರು ಉಪವಿಭಾಗ ವ್ಯಾಪ್ತಿಯ ಬಡಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಆರೋಗ್ಯ ಸೇವೆ ಎಷ್ಟು ಹದಗೆಟ್ಟಿದೆ ಎನ್ನುವುದನ್ನು ನಾವೆಲ್ಲರೂ ಕೋವಿಡ್ ಸಂದರ್ಭದಲ್ಲಿ ಕಂಡಿದ್ದೇವೆ. ಬಡಜನರಿಗೆ ಅನುಕೂಲವಾಗುವ ರೀತಿಯಲ್ಲಿ ಇದೀಗ ಕಾವೇರಿ ಆಸ್ಪತ್ರೆಯಲ್ಲಿ ಸೇವೆ ಸಿಗುತ್ತಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ಜೀವನದಲ್ಲಿ ಎದುರಾಗುವ ಬಡತನ, ಒತ್ತಡ ಮುಂತಾದವುಗಳನ್ನು ಎದುರಿಸುತ್ತಲೇ ಪರಿಶ್ರಮದಿಂದ ಸಾಧನೆಗೈಯುವುದು ಶಾಶ್ವತವಾಗಿ ಉಳಿಯಲಿದೆ ಎನ್ನುವುದನ್ನು ವಿದ್ಯಾರ್ಥಿಗಳು ಅರಿಯಬೇಕೆಂದು ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಹೇಳಿದರು.

ಪಟ್ಟಣದ ಕಾವೇರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಬುಧವಾರ ಆಸ್ಪತ್ರೆಯ ನೂತನ ಪ್ರಯೋಗಾಲಯವನ್ನು ಉದ್ಘಾಟಿಸಿ, ಆವರಣದಲ್ಲಿ ಆಯೋಜಿಸಿದ್ದ ನಾಗರಿಕ ಸನ್ಮಾನ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಕಾವೇರಿ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಆರ್ಥಿಕ ಸಂಕಷ್ಟ, ಒತ್ತಡದ ಬದುಕು ಎಲ್ಲವೂ ಸಹಜವಾಗಿರುತ್ತದೆ. ಅದರಿಂದಾಗಿಯೇ ನಿಮ್ಮ ಶಿಕ್ಷಣ ಮತ್ತು ಸಾಧನೆಗೆ ತಡೆಯಾಗಬಾರದು. ಸಕಾರಾತ್ಮಕ ಚಿಂತನೆಯೊಂದಿಗೆ ಇವೆಲ್ಲವುಗಳ ನಡುವೆಯೇ ಮುನ್ನುಗ್ಗಿ. ಶಿಸ್ತಿನ ಜೀವನ, ಕಠಿಣ ಪರಿಶ್ರಮ, ಶ್ರದ್ಧೆ ಬದುಕಿನಲ್ಲಿ ರೂಪಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾವೇರಿಯ ಸಾಧನೆ ಅನನ್ಯ:

ಕಾವೇರಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಲೋಹಿತ್ ಅವರ ನೇತೃತ್ವದಲ್ಲಿ ಹುಣಸೂರು ಉಪವಿಭಾಗ ವ್ಯಾಪ್ತಿಯ ಬಡಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಆರೋಗ್ಯ ಸೇವೆ ಎಷ್ಟು ಹದಗೆಟ್ಟಿದೆ ಎನ್ನುವುದನ್ನು ನಾವೆಲ್ಲರೂ ಕೋವಿಡ್ ಸಂದರ್ಭದಲ್ಲಿ ಕಂಡಿದ್ದೇವೆ. ಬಡಜನರಿಗೆ ಅನುಕೂಲವಾಗುವ ರೀತಿಯಲ್ಲಿ ಇದೀಗ ಕಾವೇರಿ ಆಸ್ಪತ್ರೆಯಲ್ಲಿ ಸೇವೆ ಸಿಗುತ್ತಿದೆ. ನಾನು ರಾಜ್ಯಪಾಲನಾಗಿ ಎತ್ತರದ ಸ್ಥಾನದಲ್ಲಿದ್ದರೂ ನನಗೆ ಅನ್ನ ನೀಡಿದ ನೆಲ ಹುಣಸೂರು, ಜನರ ಪ್ರೀತಿ ಗಳಿಸಿದ ಊರು ಹುಣಸೂರು, ಈ ಜನರ, ನೆಲದ ಋಣ ನನ್ನ ಮೇಲಿದೆ. ಇಲ್ಲಿನ ಜನರ ಪ್ರೀತಿಯ, ಸನ್ಮಾನ ನನಗೆಂದೂ ಅಪ್ಯಾಯಮಾನ. ನಾನೆಂದೂ ಮರೆಯಲಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಈ ಭಾಗದ ಜನರಿಂದ ಗುರುತಿಸಲ್ಪಟ್ಟಿರುವ ಮೇಘಾಲಯ ರಾಜ್ಯಪಾಲ ವಿಜಯಶಂಕರ್ ಈಗಲೂ ತಮ್ಮೂರಿನ ಜನರೊಂದಿಗೆ ಅಷ್ಟೇ ಸರಳ, ಸಜ್ಜನಿಕೆಯಿಂದ ಬೆರೆಯುತ್ತಿರುವುದು ಆಶ್ಚರ್ಯ ಮೂಡಿಸಿದೆ. ಎರಡು ದಿನಗಳ ಹಿಂದೆ ಆರಂಭಗೊಂಡ ಈ ಸಾಲಿನ ತಂಬಾಕು ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮದಲ್ಲಿ ರೈತರು ವಿಜಯಶಂಕರ್ ಅವರನ್ನು ನೆನಪಿಸಿಕೊಳ್ಳುತ್ತಿರುವುದು ಅವರ ಸೇವೆ ಮತ್ತು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದರು.

ಕಾವೇರಿ ಆಸ್ಪತ್ರೆಯ ತಾಲೂಕಿನ ಜನತೆಗೆ ಉತ್ತಮ ಸೇವೆ ನೀಡುತ್ತಿದೆ. ಯಾರೇ ಆಗಲೀ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಲಿ. ನಂತರ ತಾಲೂಕಿನ ಅಭಿವೃದ್ಧಿಗೆ ಸಹಕರಿಸಬೇಕೇ ಹೊರತು ತಡೆಯೊಡ್ಡುವುದಲ್ಲ. ಪ್ರಸ್ತುತ ದಿನಗಳಲ್ಲಿ ಮೆಡಿಕಲ್ ಮಾಫಿಯಾ ಎಷ್ಟು ಪ್ರಭಾವ ಬೀರುತ್ತಿದೆ ಎನ್ನುವುದನ್ನು ನಾವೆಲ್ಲರೂ ತಿಳಿದಿದ್ದೇವೆ. ಇಂತಹ ಪರಿಸ್ಥಿತಿಯಲ್ಲೂ ಜನರ ಕೈಗೆಟುಕುವಂತೆ ಕಾವೇರಿ ಆಸ್ಪತ್ರೆ ಈ ಭಾಗದ ಜನರಿಗೆ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಸರ್ಕಾರಗಳು ಜನರಿಗೆ ತೊಂದರೆಯನ್ನುಂಟು ಮಾಡಿರುವ ಅನ್ನ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಬದಲಾಗಿ ಗ್ಯಾರಂಟಿಗಳು ದೇಶವನ್ನು ಹಾಳು ಮಾಡುತ್ತವೆ ಅಷ್ಟೆ. ಬಡಜನರ ಸೇವೆಗಾಗಿ ದುಡಿಯುತ್ತಿರುವ ಕಾವೇರಿ ಆಸ್ಪತ್ರೆ ತೆರೆಯದಂತೆ ಕೆಲ ಶಕ್ತಿಗಳು ಪ್ರಯತ್ನಿಸಿದ್ದವು. ಇದೊಂದು ದುರಂತವೇ ಸರಿ. ಕಾವೇರಿ ಆಸ್ಪತ್ರೆ ಈ ಭಾಗದ ಜನರ ಬದುಕಿನ ಆಸರೆಯಾಗಿ ಬೆಳೆಯುತ್ತಿದೆ ಎಂದರು.

ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಆಶೀವರ್ಚನ ನೀಡಿ, ತನ್ನಲ್ಲಿರುವ ಸಂಪತ್ತಿಗೆ ಸನ್ಮಾರ್ಗ ತೋರುವ ದಾರಿಯಲ್ಲಿ ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ. ಲೋಹಿತ್ ಹೋಗುತ್ತಿದ್ದಾರೆ. ಸಂಪತ್ತಿನ ಮೂಲಕ ಸಂಬಂಧಗಳನ್ನು ಬೆಸೆಯುವ ಕಾರ್ಯ ನಡೆಸಿರುವುದು ಸ್ವಾಗತಾರ್ಹ ಎಂದರು.

ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಕೀಳರಿಮೆಯನ್ನು ತೊರೆದು ಸಾಧನೆಯತ್ತ ಮುಂದಡಿಯಿಡಬೇಕು. ಸಾಧನೆಗೆ ಬಡತನ ಕಾರಣವಾಗಬಾರದು ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಿ. ಮಂಜುನಾಥ್ ಪ್ರಧಾನ ಭಾಷಣ ಮಾಡಿದರು.

ಆಸ್ಪತ್ರೆ ಮುಖ್ಯಸ್ಥ ಡಾ. ಲೋಹಿತ್ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಅರಸು ಪುತ್ಥಳಿಯಿಂದ ಕಾವೇರಿ ಆಸ್ಪತ್ರೆಯವರೆಗೆ ರಾಜ್ಯಪಾಲರು ಗಣ್ಯರೊಂದಿಗೆ ಮೆರವಣಿಗೆ ಮೂಲಕ ಬಂದರು. ಕಾವೇರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಯೋಗಾಲಯವನ್ನು ರಾಜ್ಯಪಾಲರು ಸೇವೆಗೆ ಸಮರ್ಪಿಸಿದರು.

ನಗರಸಭಾಧ್ಯಕ್ಷ ಶರವಣ ಮಾತನಾಡಿದರು. ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಗಣೇಶ್ ಕುಮಾರಸ್ವಾಮಿ, ಸತೀಶ್ ಕುಮಾರ್, ದೇವರಾಜ್, ಮುಖಂಡರಾದ ಬಸವಲಿಂಗಯ್ಯ, ರಂಜಿತಾ ಚಿಕ್ಕಮಾದು, ವೆಂಕಟರಮಣ ಇದ್ದರು.

ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಈ ಸಾಲಿನಲ್ಲಿ ವೃತ್ತಿಪರ ಕೋರ್ಸ್ಗಳಿಗೆ ಸೀಟ್ ಗಳಿಸಿಕೊಂಡ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿತು.