ವ್ಯಕ್ತಿ ಬರ್ಬರ ಹತ್ಯೆ; ಕೊಲೆ ಆರೋಪಿಗೆ ಗುಂಡೇಟು

| Published : Apr 11 2025, 12:34 AM IST

ವ್ಯಕ್ತಿ ಬರ್ಬರ ಹತ್ಯೆ; ಕೊಲೆ ಆರೋಪಿಗೆ ಗುಂಡೇಟು
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರ ನಾಲ್ಕನೇ ಕ್ರಾಸ್‌ನಲ್ಲಿ ಬುಧವಾರ ರಾತ್ರಿ ಹಳೆ ವೈಷಮ್ಯದ ಹಿನ್ನೆಲೆ ಚಾಕುವಿನಿಂದ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದ್ದು, ಪಂಚನಾಮೆ ವೇಳೆ ಕೊಲೆ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಗುಂಡು ಹಾರಿಸಲಾಗಿದೆ.

ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪಿ । ಗುಂಡು ಹಾರಿಸಿದ ಪಿಐ ಹುಲುಗಪ್ಪಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರದ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರ ನಾಲ್ಕನೇ ಕ್ರಾಸ್‌ನಲ್ಲಿ ಬುಧವಾರ ರಾತ್ರಿ ಹಳೆ ವೈಷಮ್ಯದ ಹಿನ್ನೆಲೆ ಚಾಕುವಿನಿಂದ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದ್ದು, ಪಂಚನಾಮೆ ವೇಳೆ ಕೊಲೆ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಗುಂಡು ಹಾರಿಸಲಾಗಿದೆ.

ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ನಗರದ ಅಂಬೇಡ್ಕರ್ ನಗರದ ನಿವಾಸಿ ಹೊನ್ನೂರ (28) ಕೊಲೆಯಾದ ವ್ಯಕ್ತಿಯಾಗಿದ್ದು, ಕೊಲೆ ಮಾಡಿದ ಆರೋಪದಲ್ಲಿ ಅದೇ ಬಡಾವಣೆಯ ಕಾಳಿ (30) ಎಂಬುವನನ್ನು ಬಂಧಿಸಲಾಗಿದೆ ಎಂದರು.

ಹಳೇ ವೈಷಮ್ಯ:

2015ರಲ್ಲಿ ಅನೈತಿಕ ಸಂಬಂಧ ಕೊಲೆ ಪ್ರಕರಣದಲ್ಲಿ ಕಾಳಿಯ ವಿರುದ್ಧ ಹೊನ್ನೂರ ಸಾಕ್ಷಿ ಹೇಳಿದ್ದರು. ಈ ದ್ವೇಷದ ಹಿನ್ನೆಲೆ 2021ರಲ್ಲಿ ಕೂಡ ಹೊನ್ನೂರ ಮೇಲೆ ಕಾಳಿಯಿಂದ ಕೊಲೆಗೆ ಯತ್ನ ನಡೆದಿತ್ತು. ನಂತರದಲ್ಲಿ ಹೊನ್ನೂರ ದಾವಣಗೆರೆಯಲ್ಲಿ ವಾಸವಾಗಿದ್ದರು. ಅಲ್ಲೇ ಜೀವನ ನಡೆಸುತ್ತಿದ್ದರು. ನಗರದ ಹೊರ ವಲಯದ ಜಂಬುನಾಥೇಶ್ವರ ರಥೋತ್ಸವ ಹಿನ್ನೆಲೆ ನಗರಕ್ಕೆ ಆಗಮಿಸಿದ್ದ ಹೊನ್ನೂರನ ಮೇಲೆ ಮತ್ತೆ ಬುಧವಾರ ರಾತ್ರಿ ಆರೋಪಿ ಕಾಳಿ ಚಾಕುವಿನಿಂದ ಚುಚ್ಚಿ, ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ ಎಂದು ಇಲ್ಲಿನ ಪಟ್ಟಣ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಫೈರಿಂಗ್‌:

ನಗರದಲ್ಲಿ ಬುಧವಾರ ರಾತ್ರಿ ನಡೆದ ಕೊಲೆ ಪ್ರಕರಣದ ಆರೋಪಿ ಕಾಳಿಗೆ ಬುಧವಾರ ಮಧ್ಯರಾತ್ರಿ ಪೊಲೀಸರು ಬಂಧಿಸಿ, ಗುರುವಾರ ಬೆಳಗಿನ ಜಾವ ಪಂಚನಾಮೆ ನಡೆಸಲಾಗಿದೆ. ಚಾಕು ಬಚ್ಚಿಟ್ಟ ಜಾಗ ತೋರಿಸುವೆ ಎಂದು ಕೊಲೆ ಆರೋಪಿ ಕಾಳಿ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಮುಖ್ಯಪೇದೆ ಲಿಂಗರಾಜ ಹಾಗೂ ಪೇದೆ ಕೊಟ್ರೇಶ್‌ಗೆ ಗಾಯಗಳಾಗಿವೆ. ತಮ್ಮ ರಕ್ಷಣೆಗಾಗಿ ಸ್ಥಳದಲ್ಲಿದ್ದ ತನಿಖಾಧಿಕಾರಿ ಪಿಐ ಹುಲುಗಪ್ಪ ಆರೋಪಿ ಬಲಗಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಆರೋಪಿ ಬಲಗಾಲಿಗೆ ಒಂದು ಗುಂಡು ತಗುಲಿದೆ. ಕೊಲೆ ಆರೋಪಿ ಹಾಗೂ ಹಲ್ಲೆಗೊಳಗಾದ ಪೊಲೀಸರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ಪ್ರಕರಣದಲ್ಲಿ ಪೊಲೀಸರು ತಮ್ಮ ರಕ್ಷಣೆಗಾಗಿ ಫೈರಿಂಗ್‌ ಮಾಡಿದ್ದಾರೆ. ಪಂಚನಾಮೆ ನಡೆಸಲು ಹೋದಾಗ ಈ ಘಟನೆ ನಡೆದಿದೆ ಎಂದರು.

ಈ ಮಧ್ಯೆ ಗಾಯಗೊಂಡಿರುವ ಪೊಲೀಸರಾದ ಲಿಂಗರಾಜ ಮತ್ತು ಕೊಟ್ರೇಶ್‌ ನೀಡಿದ ದೂರಿನ ಆಧಾರದ ಮೇಲೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲೂ ಆರೋಪಿ ಕಾಳಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಲೆಯಾದ ವ್ಯಕ್ತಿ ದೇಹದ ಮೇಲೆ 21 ಗಾಯಗಳಾಗಿವೆ. ಆರೋಪಿ ಕೊಲೆಗೆ ಮೂರು ಚಾಕು ಬಳಸಿದ್ದ ಎಂದು ಹೇಳಲಾಗುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತಲೆ ಮೇಲೆ ಸೈಜು ಗಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.