ಸಾರಾಂಶ
ಹಾವೇರಿ: ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಸಮುದಾಯಗಳೊಂದಿಗೆ ನಿಕಟ ಸಂಬಂಧ ಬೆಸೆಯುವ ಕೊಂಡಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಸೇವಾ ಯೋಜನೆಗೆ ಸೇರಿಸಿ ಎಂದು ಎಲ್ಲ ಮಹಾವಿದ್ಯಾಲಯಗಳ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ತಿಳಿಸಿದರು.ನಗರದ ಹೊರವಲಯದಲ್ಲಿರುವ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಾವೇರಿ ವಿಶ್ವವಿದ್ಯಾಲಯ, ಹಾವೇರಿಯಲ್ಲಿ ಎನ್‌ಎಸ್‌ಎಸ್ ಘಟಕ ಒಂದು ಮತ್ತು ಘಟಕ ಎರಡರ ಉದ್ಘಾಟನೆ ಹಾಗೂ ಹಿಂದುಳಿದ ವರ್ಗಗಳ ಸಮೀಕ್ಷಾ ಪೂರ್ವ ತಯಾರಿ ಕಾರ್ಯಾಗಾರ ಮತ್ತು ಹಾವೇರಿ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಗೆ ವಿದ್ಯಾರ್ಥಿಗಳು ಸೇರುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜತೆಗೆ ಸಾಮಾಜಿಕವಾಗಿ ಆಗುಹೋಗುಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ. ಸಮಾಜ ಸೇವೆ ಮಾಡುವುದರಿಂದ ಮಕ್ಕಳಿಗೆ ಸೇವಾ ಮನೋಭಾವ ಬೆಳೆಯುತ್ತದೆ. ಸಮಾಜದೊಂದಿಗೆ ಒಗ್ಗೂಡಿಕೆ ಹಾಗೂ ಇತರೆ ಸಮಾಜದ ಎಲ್ಲ ವಿಚಾರ ತಿಳಿಯುವುದರಿಂದ ಯುವ ಪೀಳಿಗೆ ಮನವರಿಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು. ಮೌಲ್ಯಮಾಪಕ ಕುಲಸಚಿವರಾದ ಪ್ರೊ. ರೇಣುಕಾ ಮೇಟಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಯುವ ಪೀಳಿಗೆಯ ಬದುಕನ್ನು ಕಟ್ಟಿಕೊಳ್ಳಲು, ಸಮಾಜದ ಹೊಂದಾಣಿಗೆ ಸ್ಫೂರ್ತಿ ನೀಡುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಕಟ್ಟಿಕೊಳ್ಳಲು ಸಹಾಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಾವೇರಿ ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಚನ್ನಬಸಪ್ಪ ಕುಮ್ಮೂರು, ಹಾವೇರಿ ಜಿಲ್ಲಾ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಡಾ. ಶಮಂತಕುಮಾರ ಕೆ.ಎಸ್., ಹಾವೇರಿ ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಕವಿತಾ ನಾಯ್ಕ, ಅರುಣಕುಮಾರ ಹಿರೇಮಠ ಇತರರು ಇದ್ದರು.