ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಎಂಎಸ್‌ಐಎಲ್ ನಿಗಮದ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದ ಹೊರವಲಯದ ಮಲ್ಲಯ್ಯನಪುರ ಸರ್ಕಾರಿ ಆದರ್ಶ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೨೦೨೬- ೨೭ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಹಾಗೂ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶಿಕ್ಷಣವೇ ಪ್ರಬಲ ಅಸ್ತ್ರ, ವಿದ್ಯಾರ್ಥಿ ದೆಸೆಯಲ್ಲೇ ತಾವು ಅಂದುಕೊಂಡಿದ್ದ ಗುರಿಮುಟ್ಟಲು ಯೋಜನೆ ಹಾಕಿಕೊಳ್ಳಬೇಕು, ಸಮಯಪಾಲನೆ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ರೂಪಿಸಿದ್ದು, ಅದರ ಸದ್ಬಳಕೆಗೆ ಮುಂದಾಗಬೇಕು ಎಂದರು.

ಎಂಎಸ್‌ಐಎಲ್ ಸಿಎಸ್‌ಆರ್ ನಿಧಿಯಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಗುವುದು ಎಂದರು.


ಆಲೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣ ಪಡೆಯುವುದರ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು, ಮೊಬೈಲ್ ಗೀಳಿನಿಂದ ದೂರವಿರಬೇಕು, ತಂದೆ- ತಾಯಿಗಳು, ಗುರು- ಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು.

ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿದ್ಯಾರ್ಥಿಗಳ ಭದ್ರತೆ ದೃಷ್ಟಿಯಿಂದ ಶಾಲೆಯ ಸುತ್ತಲೂ ಸುತ್ತುಗೋಡೆ, ವಿದ್ಯಾರ್ಥಿಗಳಿಗೆ ಶೌಚಾಲಯ ನಿರ್ಮಿಸಿಕೊಡುವಂತೆ ಶಿಕ್ಷಕರು ಶಾಸಕರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸ್ವಾಗತಿಸಿ ಬರಮಾಡಿಕೊಂಡರು.

ಎಸ್‌ಡಿಎಂಸಿ ಸದಸ್ಯ ಸೋಮಣ್ಣ, ಉಡಿಗಾಲ ಮಹದೇವ್, ಜಿಲ್ಲಾ ಪದವಿಪೂರ್ವ ಶಿಕ್ಷಣಇಲಾಖೆ ಉಪನಿರ್ದೇಶಕಿ ಪುಟ್ಟಗೌರಮ್ಮ, ಪ್ರೌಢಶಾಲಾ ಮುಖ್ಯ ಶಿಕ್ಷಕ ತ್ಯಾಗರಾಜ್ ಮೂರ್ತಿ, ಪ್ರಾಂಶುಪಾಲ ನಿಂಗಯ್ಯ. ಸಹಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.