ಸಾರಾಂಶ
ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಪರಿಕಲ್ಪನೆಯು ಉನ್ನತ ಶಿಕ್ಷಣ ವ್ಯವಸ್ಥೆಗೆ ವಿಸ್ತೃತ ಆಯಾಮ ನೀಡುವುದು
ಹೊಳೆಆಲೂರ: ಎನ್.ಎಸ್.ಎಸ್.ನಲ್ಲಿ ಭಾಗವಹಿಸುವುದರಿಂದ ನಾಯಕತ್ವ ಗುಣ ಬೆಳೆಸಿಕೊಳ್ಳಬಹುದು. ಇದು ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಶೈಕ್ಷಣಿಕ ಕಾರ್ಯಕ್ರಮವಾಗಿದೆ ಎಂದು ಪ್ರಾ. ಬಿ.ಕೆ.ಸುರಕೋಡ ಹೇಳಿದರು.
ಹೋಬಳಿಯ ಮೇಲ್ಮಠ ಗ್ರಾಮದಲ್ಲಿ ಸ್ಥಳೀಯ ಕಲ್ಮೇಶ್ವರ ಪಪೂ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ 2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಪರಿಕಲ್ಪನೆಯು ಉನ್ನತ ಶಿಕ್ಷಣ ವ್ಯವಸ್ಥೆಗೆ ವಿಸ್ತೃತ ಆಯಾಮ ನೀಡುವುದು ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವಾಗ ಸಮುದಾಯ ಸೇವೆಗೆ ಒಲವು ತೋರುವುದು, ಸಾಮಾಜಿಕ ಪ್ರಜ್ಞೆ ಮೂಡಿಸುವುದು, ಕ್ಯಾಂಪಸ್ ಮತ್ತು ಸಮುದಾಯದ ನಡುವೆ, ವಿಶೇಷವಾಗಿ ಗ್ರಾಮೀಣ ಸಮುದಾಯದ ನಡುವೆ ಅರ್ಥಪೂರ್ಣ ಸಂಪರ್ಕ ಕಲ್ಪಿಸುವುದು ಸದುದ್ದೇಶವಾಗಿದೆ ಎಂದರು.
ಈ ವೇಳೆ ಅಸೂಟಿ ಗ್ರಾಪಂ ಸದಸ್ಯ ರಾಚಯ್ಯ ಕಾಡಸಿದ್ದೇಶ್ವರಮಠ ಮಾತನಾಡಿದರು. ಯಚ್ಚರೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಭೀಮಪ್ಪ ತಳವಾರ, ನಾಗಪ್ಪ ಪೂಜಾರ, ಶ್ರೀರಪ್ಪ ಮುತ್ತಲಗೇರಿ, ಬಸವರಾಜ ಪೂಜಾರ, ಸಹ ಉಪನ್ಯಾಸಕ ವಿ.ಎಂ.ಸುಳ್ಳದ, ಎಸ್.ಎಸ್. ಗುಳೇದಗುಡ್ಡ, ಎಸ್.ಆರ್. ನಾಯಕ, ಎಂ.ಆರ್.ಉಂಡಿ, ಆರ್.ಬಿ. ದೊಡ್ಡಮನಿ, ವಿ.ಬಿ. ಉಗಲಾಟ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.