ಸಾರಾಂಶ
ಹಾನಗಲ್ಲ: ಕಾಲೇಜು ಹಂತದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಸಾಧ್ಯವಿದ್ದು, ದೆಹಲಿಯಲ್ಲಿ ನಡೆಯುವ ಪಥಸಂಚಲನದಲ್ಲಿ ಅವಕಾಶ ಗಿಟ್ಟಿಸುವ ಮೂಲಕ ಉನ್ನತ ಶಿಕ್ಷಣ ಪ್ರವೇಶಾವಕಾಶ ಹೆಚ್ಚಿಸಿಕೊಳ್ಳಬೇಕು ಎಂದು ಕುಮಾರೇಶ್ವರ ಕಲಾ- ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಎಚ್. ಹೊಳಿಯಣ್ಣನವರ ತಿಳಿಸಿದರು.ದೆಹಲಿಯಲ್ಲಿ ಜನವರಿ 26ರಂದು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಹಾವೇರಿ ವಿಶ್ವವಿದ್ಯಾಲಯ ಮಟ್ಟದ ಕಾಲೇಜುಗಳ ವಿದ್ಯಾರ್ಥಿಗಳ ಆಯ್ಕೆಗೆ ಇಲ್ಲಿನ ಕುಮಾರೇಶ್ವರ ಕಲಾ- ವಾಣಿಜ್ಯ ಮಹಾವಿದ್ಯಾಲಯದಲ್ಲಿ ಚಾಲನೆ ನೀಡಿ ಮಾತನಾಡಿದರು.ಕಾಲೇಜು ಆವರಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಹಾವೇರಿ ವಿವಿ ಅಡಿಯಲ್ಲಿನ 45 ಕಾಲೇಜುಗಳ ತಲಾ ಇಬ್ಬರು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಪೈಕಿ ಮೂರು ವಿದ್ಯಾರ್ಥಿನಿಯರು ಮತ್ತು ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣಾ ಪತ್ರ, ಅವರ ಎತ್ತರ, ಪಥಸಂಚಲನದ ನಡುವಳಿಕೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಪ್ರಕ್ರಿಯೆ ವ್ಯವಸ್ಥೆಗೊಳಿಸಿದ್ದ ಸ್ಥಳೀಯ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಸತ್ಯಸಾವಿತ್ರಿ ವಿ.ಬಿ. ತಿಳಿಸಿದರು.ಹಾವೇರಿ ವಿವಿ ಎನ್‌ಎಸ್‌ಎಸ್ ಸಂಚಾಲಕ ಮಂಜುನಾಥ ಸೋಲಾರಗೊಪ್ಪ, ಶಿವಯೋಗಿ ಹಾವೇರಿ ಅವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.ಹಾವೇರಿ ಜಿಎಚ್ ಕಾಲೇಜಿನ ಎನ್‌ಸಿಸಿ ಲೆಪ್ಟಿನೆಂಟ್ ನಾಗರಾಜ ಎಂ., ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಸಿ.ಎಸ್. ಕುಮ್ಮೂರ, ಚನ್ನಬಸಪ್ಪ ಸೊರಟೂರ, ಶಮಂತಕುಮಾರ ಕೆ.ಎಸ್. ಇದ್ದರು. ತೇಜಸ್ವಿನಿ ಪೂಜಾರಗೆ ವೀರಾಗ್ರಣಿ ಪ್ರಶಸ್ತಿ
ಹಾವೇರಿ: ಇತ್ತಿಚೇಗೆ ನಡೆದ ಕನವಳ್ಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಬಾಲಕಿಯರ ವೈಯಕ್ತಿಕ ಕ್ರೀಡಾಕೂಟದಲ್ಲಿ ವೀರಾಗ್ರಣಿ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಜಯಪ್ಪ ಪೂಜಾರ ಇತ್ತೀಚೆಗೆ ಕೂರಗುಂದ ಗ್ರಾಮದಲ್ಲಿ ನಡೆದ 2025- 26ನೇ ಸಾಲಿನ ಕನವಳ್ಳಿ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಗಳಲ್ಲಿ ಬಾಲಕಿಯರ ವೈಯಕ್ತಿಕ ವಿಭಾಗದ ಆಟಗಳಲ್ಲಿ ವೀರಾಗ್ರಣಿ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಉತ್ತಮ ಕ್ರೀಡಾ ಪ್ರದರ್ಶನ ತೋರಿದ ವಿದ್ಯಾರ್ಥಿನಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.