ಮಹಾ ಪುರುಷರ ನೆನಪಿಸಿಕೊಂಡು ವ್ಯಕ್ತಿತ್ವ ಎತ್ತರಿಸಬೇಕು

| Published : Sep 15 2024, 02:06 AM IST

ಸಾರಾಂಶ

ಇತಿಹಾಸ ಮರೆತರೆ ಭವಿಷ್ಯ ಕಟ್ಟಲು ಸಾಧ್ಯವಿಲ್ಲ. ಇತಿಹಾಸ ಪುರುಷರನ್ನು ನೆನಪಿಸಿಕೊಳ್ಳುವುದರ ಮೂಲಕ ನಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಎತ್ತರಗೊಳಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭವಾರ್ತೆ ಹೊಸದುರ್ಗಇತಿಹಾಸ ಮರೆತರೆ ಭವಿಷ್ಯ ಕಟ್ಟಲು ಸಾಧ್ಯವಿಲ್ಲ. ಇತಿಹಾಸ ಪುರುಷರನ್ನು ನೆನಪಿಸಿಕೊಳ್ಳುವುದರ ಮೂಲಕ ನಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಎತ್ತರಗೊಳಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಎಸ್‌.ಎಸ್‌ ರಂಗಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ದಿಟ್ಟ ಹೆಜ್ಜೆಯ ಧೀರ ಪ್ರಭು ವಿಷಯ ಕುರಿತ ದಂದಣ ದತ್ತಣ ಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದರು.

ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ನಂಬಿಕೆಯಿಲ್ಲದ ವ್ಯಕ್ತಿಯಿಂದ ಏನೂ ಸಾಧಿಸಲು ಸಾಧ್ಯಯವಿಲ್ಲ . ನಮ್ಮ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ನಂಬಿಕೆಯ ಸಾಕಾರ ಮೂರ್ತಿಯಾಗಿದ್ದರು. ಶಿಷ್ಯರ ಬಗ್ಗೆ ಅಪಾರ ನಂಬಿಕೆಯನ್ನಿಟ್ಟು ಕೊಂಡಿದ್ದರು. ನಂಬಿಕೆಗೆ ದ್ರೋಹ ಬಗೆದರೆ ತಕ್ಷಣ ಕ್ರಮ ತೆಗೆದುಕೊಂಡು ಜಾಗೃತರನ್ನಾಗಿ ಮಾಡುತ್ತಿದ್ದರೇ ಹೊರತು, ಒದ್ದು ಮಠದಿಂದ ಹೊರಗೆ ಹಾಕಬೇಕು ಎನ್ನುವ ಮನಸ್ಥಿತಿ ಅವರಲ್ಲಿರಲಿಲ್ಲ. ಅವರನ್ನು ತಿದ್ದಿ, ತೀಡಿ ಸರಿದಾರಿಗೆ ತರುವ ಕಾರ್ಯ ಮಾಡುತ್ತಿದ್ದರು ಎಂದರು.

ಶ್ರೀ ಶಿವಕುಮಾರ ಶ್ರೀಗಳು ವೈಚಾರಿಕತೆಯಿಂದ ಬಾಳಿ ಬದುಕಿದವರು. ಮೌಧ್ಯಾಚರಣೆಗಳಿಗೆ ವಿರೋಧ ವ್ಯಕ್ತ ಪಡಿಸುತ್ತಿದ್ದ ಅವರು, ಅಮವಾಸ್ಯೆಯ ದಿನದಂದೇ ಅನೇಕ ಜನರಿಗೆ ಮದುವೆ ಮಾಡಿಸಿದ್ದರು. ಆ ಎಲ್ಲ ಕುಟುಂಬಗಳು ಇವತ್ತಿಗೂ ಸುಖವಾಗಿ ಸಂಸಾರವನ್ನು ಬಾಳುತ್ತಿದ್ದಾರೆ ಎಂದು ತಿಳಿಸಿದರು.

ಸಿ.ಕೆ ಶಿವಮೂರ್ತಿಯವರು ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿಕೊಡುವ ಮಠ ಸಾಣೇಹಳ್ಳಿಯ ಮಠ. ಇಂತಹ ಮಠದಲ್ಲಿ ಅಕ್ಕನ ಬಳಗ, ಅಣ್ಣನ ಬಳಗವನ್ನು ಸ್ಥಾಪಿಸಿ ಶರಣರ ವಿಚಾರಗಳನ್ನು ಪ್ರಚಾರ ಮಾಡಿದರು. ಸಮಾಜದಲ್ಲಿ ಯಾವ ರೀತಿಯ ಬಾಳಬೇಕೆಂದು ಮಾರ್ಗದರ್ಶನ ಮಾಡಿದ ಮಠ ತರಳಬಾಳು ಮಠ ಎಂದರು.

ಬಿ.ಪಿ ಓಂಕಾರಪ್ಪ ಮಾತನಾಡಿ, ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಸಹಪಂಕ್ತಿ ಭೋಜನದ ವ್ಯವಸ್ಥೆ ಮಾಡಿದ ಕೀರ್ತಿ ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ. ಯಾರನ್ನೂ ಜಾತಿಯಿಂದ ಅಳೆಯದೇ ನೀತಿಯಿಂದ ಅಳೆಯಬೇಕು ಎಂದು ಹೇಳಿ ಸಮಸಮಾಜವನ್ನು ನಿರ್ಮಾಣ ಮಾಡಿದರು. ಯಾವುದೇ ಕಾಯಕ ಮಾಡಿದರೂ ಸತ್ಯಶುದ್ಧವಾಗಿರಬೇಕು. ಅದು ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಕೂಡಿರಬೇಕು ಎಂದು ಹೇಳುತ್ತಿದ್ದರು ಎಂದರು. ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ.ವಿ ಗಂಗಾಧರಪ್ಪ ಉಪಸ್ಥಿತರಿದ್ದರು. ತರಳಬಾಳು ಗುರುಪರಂಪರೆಯ ವಿಷಯ ಕುರಿತು ನಯನ ಡಿ. ಲೋಕೆಶ್, ಪ್ರಾರ್ಥನ, ಹೇಮಂತ್, ಅಮೃತ, ಅಕ್ಷಯ ಮಾತನಾಡಿದರು. ಸಂಗೀತ ಶಿಕ್ಷಕ ನಾಗರಾಜ್ ಹಾಗೂ ತಬಲಸಾಥಿ ಶರಣ್ ವಚನ ಗೀತೆಗಳನ್ನು ಹಾಡಿದರು. ದಿವ್ಯಶ್ರೀ ಸ್ವಾಗತಿಸಿದರು. ಅಭಿಷೇಕ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದನು. ಶಾಲಾ ಮಕ್ಕಳು ವಚನಗೀತೆಗೆ ಆಕರ್ಷಕ ನೃತ್ಯ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾಮಕ್ಕಳು, ಶಿಕ್ಷಕರು, ನೌಕರರು, ಗ್ರಾಮಸ್ಥರು, ಪೋಷಕರು ಭಾಗವಹಿಸಿದ್ದರು.