ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯ ಸೇವಿಸಿದ ಬಿಲ್ ಭರಿಸಲು ಕೇಳಿದ್ದಕ್ಕೆ ಮೂವರು ವ್ಯಕ್ತಿಗಳು ಬಾರ್‌ನ ಕ್ಯಾಶಿಯರ್ ಹಾಗೂ ಸಹಾಯಕ ಕ್ಯಾಶಿಯರ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿರುವ ಘಟನೆ ವಿದ್ಯಾರಣ್ಯಪುರದ ನರಸೀಪುರದ ಜಯಶ್ರೀ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಶನಿವಾರ ರಾತ್ರಿ ಸುಮಾರು 10.30ಕ್ಕೆ ನಡೆದಿದೆ.ಬಾರ್ ಕ್ಯಾಶಿಯರ್ ರಂಜಿತ್ ಮತ್ತು ಸಹಾಯಕ ಕ್ಯಾಶಿಯರ್ ಅಖಿಲೇಶ್ ಹಲ್ಲೆಗೊಳಗಾದವರು. ಈ ಸಂಬಂಧ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ನಿವಾಸಿಗಳಾದ ಕಾರ್ತಿಕ್(22),ಚೇತನ್ ಕುಮಾರ್ (23) ಎಂಬುವವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಏನಿದು ಘಟನೆ?ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಚೇತನ್ ಮತ್ತು ಕಾರ್ತಿಕ್ ಅ.5ರಂದು ರಾತ್ರಿ 10.15ಕ್ಕೆ ಜಯಶ್ರೀ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಬಂದಿದ್ದು ಮದ್ಯ ಸೇವಿಸಿದ್ದಾರೆ. ಬಳಿಕ ಬಿಲ್ ಪಾವತಿಸುವಂತೆ ಕೇಳಿದಾಗ ಇಬ್ಬರು ಆರೋಪಿಗಳು ಕ್ಯಾಶಿಯರ್ ರಂಜಿತ್ ಮತ್ತು ಸಹಾಯಕ ಕ್ಯಾಶಿಯರ್ ಅಖಿಲೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ನಾವು ಇದೇ ಏರಿಯಾದವರು. ನಮ್ಮನ್ನೇ ಬಿಲ್ ಕೇಳುತ್ತೀರಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇನ್ನೊಮ್ಮೆ ಬಿಲ್ ಕೇಳಿದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿ ಬಾರ್‌ನಿಂದ ತೆರಳಿದ್ದಾರೆ.
ಮತ್ತೆ ಬಂದು ಬಿಯರ್ ಬಾಟಲ್‌ಗಳಿಂದ ಹಲ್ಲೆ:ರಾತ್ರಿ 10.45ಕ್ಕೆ ತಮ್ಮ ಜತೆಗೆ ಮತ್ತೊಬ್ಬನನ್ನು ಕರೆದುಕೊಂಡು ಬಾರ್ ಬಳಿ ಬಂದಿರುವ ಆರೋಪಿಗಳು ಮತ್ತೆ ಜಗಳ ತೆಗೆದು ರಂಜಿತ್ ಮತ್ತ ಅಖಿಲೇಶ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ರಂಜಿತ್ ಮುಖಕ್ಕೆ ಗಾಯವಾಗಿ ರಕ್ತ ಸುರಿದಿದೆ. ಬಳಿಕ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಬಾರ್ ಸಿಬ್ಬಂದಿ ಗಾಯಾಳು ರಂಜಿತ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸಹಾಯಕ ಕ್ಯಾಶಿಯರ್ ಅಖಿಲೇಶ್ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.