Persuade the Center to protect the lives of mountaineers
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆ ಜತೆಗೆ ಮಲೆನಾಡಿನಲ್ಲಿ ತಲೆತಲಾಂತರಗಳಿಂದ ಬದುಕುತ್ತಿರುವ ಜನರ ಕೃಷಿ, ಜೀವನೋಪಾಯ ಹಾಗೂ ಹಕ್ಕುಗಳಿಗೂ ರಕ್ಷಣೆ ದೊರೆಯುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಆಗ್ರಹಿಸಿದರು.ಕಸ್ತೂರಿರಂಗನ್ ವರದಿ ಕುರಿತು ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ಜನಜೀವನದ ನಡುವೆ ಸಮತೋಲನ ಕಾಯ್ದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದರು.ಕಸ್ತೂರಿ ರಂಗನ್ ವರದಿ ಕುರಿತು ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಕಳೆದ ಅಧಿವೇಶನದಲ್ಲಿ ಮಲೆನಾಡು ಭಾಗದ ಶಾಸಕರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಬಳಿಕ ಮುಖ್ಯಮಂತ್ರಿ ಶಾಸಕರ ಸಭೆ ಕರೆದು ಮನವಿಗಳನ್ನು ಆಲಿಸಿದ್ದು, ಇದೀಗ ವಿಶೇಷ ಚರ್ಚೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದರು.ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಜನರಲ್ಲಿ ವ್ಯಾಪಕ ಆತಂಕವಿದೆ. ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ ವೇಳೆ 25 ಸಾವಿರಕ್ಕೂ ಅಧಿಕ ಜನರು ಪಕ್ಷಾತೀತವಾಗಿ ಗಂಟೆಗಳ ಕಾಲ ಕಾಯುತ್ತಿದ್ದದ್ದು ಈ ವಿಚಾರದ ತೀವ್ರತೆಯನ್ನು ತೋರಿಸುತ್ತದೆ ಎಂದು ಹೇಳಿದರು.ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಜುಲೈ 27ರಂದು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಹಾಗೂ ಸಲಹೆ ಸಲ್ಲಿಸಲು ಸೆ.25ರವರೆಗೆ ಕಾಲಾವಕಾಶ ನೀಡಿದೆ. ಈ ಕಡಿಮೆ ಅವಧಿಯಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಸಮಗ್ರ ಮಾಹಿತಿ, ದಾಖಲೆ ಹಾಗೂ ಆಕ್ಷೇಪಣೆಗಳನ್ನು ಸಂಗ್ರಹಿಸುವುದು ಕಷ್ಟವಾಗಲಿದೆ. ಹೀಗಾಗಿ ಕೇಂದ್ರದಿಂದ ಕನಿಷ್ಠ ಒಂದು ವರ್ಷದ ಕಾಲಾವಕಾಶ ಪಡೆಯಬೇಕು ಎಂದು ಒತ್ತಾಯಿಸಿದರು.ಕಸ್ತೂರಿರಂಗನ್ ಪ್ರಸ್ತಾವಿತ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಕರ್ನಾಟಕದ 20,668 ಚದರ ಕಿ.ಮೀ. ಪ್ರದೇಶ ಗುರುತಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 137 ಗ್ರಾಮಗಳ ವಿಚಾರವೂ ಇದಕ್ಕೆ ಸಂಬಂಧಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಾಸ್ತವಾಂಶಗಳನ್ನು ಪರಿಗಣಿಸದೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಬಾರದು ಎಂದರು.ಗಾಡ್ಗಿಲ್ ಹಾಗೂ ಕಸ್ತೂರಿರಂಗನ್ ವರದಿಗಳನ್ನು ಯಾವುದೇ ಚರ್ಚೆಯಿಲ್ಲದೆ ತಿರಸ್ಕರಿಸುವುದಾಗಲಿ, ಹಾಗೆಯೇ ಅವುಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಾಗಲಿ ಸರಿಯಲ್ಲ. ಸ್ಥಳೀಯ ಪರಿಸ್ಥಿತಿ, ಜನಜೀವನ ಹಾಗೂ ರಾಜ್ಯದ ವಾಸ್ತವಾಂಶಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.ಸರ್ವಪಕ್ಷ ನಿಯೋಗ ರಚಿಸಲು ಒತ್ತಾಯ
ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರವು ವಿರೋಧ ಪಕ್ಷಗಳ ನಾಯಕರನ್ನೂ ಒಳಗೊಂಡ ಸರ್ವಪಕ್ಷ ನಿಯೋಗ ರಚಿಸಬೇಕು. ಮುಖ್ಯಮಂತ್ರಿ ನೇತೃತ್ವದಲ್ಲಿ ದೆಹಲಿಗೆ ತೆರಳಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರು ಹಾಗೂ ಪ್ರಧಾನಮಂತ್ರಿಯನ್ನು ಭೇಟಿ ಮಾಡಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ತಮ್ಮಯ್ಯ ಒತ್ತಾಯಿಸಿದರು.....ಬಾಕ್ಸ್...ವರದಿಯ ಕನ್ನಡ ಪ್ರತಿ ನೀಡಲಿ
2013ರಲ್ಲಿ ಕಸ್ತೂರಿರಂಗನ್ ನೇತೃತ್ವದ ಮಟ್ಟದ ಕಾರ್ಯಪಡೆ ವರದಿ ಸಲ್ಲಿಸಿದ ಬಳಿಕ ಹಲವು ವರ್ಷಗಳು ಕಳೆದಿವೆ. ಆದರೆ ವರದಿಯ ಅಂಶಗಳು ಸಾಮಾನ್ಯ ಜನರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕನ್ನಡದಲ್ಲಿ ಲಭ್ಯವಿಲ್ಲ. ವರದಿಯ ಪ್ರಮುಖ ಅಂಶಗಳನ್ನು ಕನ್ನಡಕ್ಕೆ ಅನುವಾದಿಸಿ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ವಿತರಿಸಬೇಕು ಎಂದು ತಮ್ಮಯ್ಯ ಆಗ್ರಹಿಸಿದರು.ಕೋಟ್...ಪಶ್ಚಿಮ ಘಟ್ಟದಲ್ಲಿ ತಲೆತಲಾಂತರಗಳಿಂದ ಬದುಕುತ್ತಿರುವ ಜನರ ಹಕ್ಕುಗಳು, ಕೃಷಿ, ಜೀವನೋಪಾಯ ಹಾಗೂ ಅಭಿವೃದ್ಧಿಯ ಸಮತೋಲನದ ನಿರ್ಧಾರ ಕೈಗೊಳ್ಳುವ ಮೂಲಕ ಮಲೆನಾಡಿನ ಬದುಕಿಗೆ ರಕ್ಷಣೆ ಒದಗಿಸಬೇಕು.- ಎಚ್.ಡಿ. ತಮ್ಮಯ್ಯ, ಚಿಕ್ಕಮಗಳೂರು ಶಾಸಕ
