ಸಾರಾಂಶ
ಗಜೇಂದ್ರಗಡ: ಗ್ರಾಮದಲ್ಲಿ ಸಮರ್ಪಕ ಮೊಬೈಲ್ ನೆಟ್‌ವರ್ಕ್ ಇಲ್ಲದ್ದಕ್ಕಾಗಿ ಬಳಿಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬಹಿಷ್ಕರಿಸಿದ್ದ ತಾಲೂಕಿನ ನಾಗೇಂದ್ರಗಡ ಗ್ರಾಮಸ್ಥರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿರುವ ಅಧಿಕಾರಿಗಳು ಗಣತಿ ಕಾರ್ಯ ಸುಗಮಗೊಳಿಸಿದರು.
ಸೋಮವಾರ ಸಮೀಕ್ಷೆ ಕಾರ್ಯಕ್ಕೆ ೧೫ಕ್ಕೂ ಅಧಿಕ ಗಣತಿದಾರರು ನಾಗೇಂದ್ರಗಡ ಗ್ರಾಮಕ್ಕೆ ತೆರಳಿದ್ದರು. ಆದರೆ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದೆ. ಹೀಗಾಗಿ ಗ್ರಾಮದ ಶಾಲೆ ಹಾಗೂ ದೇವಸ್ಥಾನವೊಂದರಲ್ಲಿ ಬಿಎಸ್‌ಎನ್‌ಎಲ್ ಕೇಬಲ್‌ನ ಮೂಲಕ ವೈಫೈ ಸಂಪರ್ಕದಿಂದ ಗಣತಿಗೆ ಮುಂದಾಗಿದ್ದರು. ಶಾಲೆ ಹಾಗೂ ದೇವಸ್ಥಾನಕ್ಕೆ ತೆರಳಿ ಮಾಹಿತಿ ನೀಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.ಮಾಹಿತಿ ನೀಡಲು ನಮ್ಮ ವಿರೋಧವಿಲ್ಲ. ನೆಟ್‌ವರ್ಕ ಸರಿಮಾಡಿ ನೀವು ನಮ್ಮ ಮನೆಗೆ ಬಂದು ಮಾಹಿತಿ ಕೇಳಿ. ನಿಮಗೆ ಮಾಹಿತಿ ನೀಡುತ್ತೇವೆ. ಆದರೆ ಗುಡಿಗೆ ಅಥವಾ ಶಾಲೆಗೆ ಬಂದು ಮಾಹಿತಿ ನೀಡಲ್ಲ ಎಂದು ಪಟ್ಟು ಹಿಡಿದರು.
ಗ್ರಾಮದಲ್ಲಿ ೪೦೦ಕ್ಕೂ ಅಧಿಕ ಕುಟುಂಬಗಳಿವೆ. ಅದೇ ರೀತಿ ನೂರಾರು ವಿದ್ಯಾರ್ಥಿಗಳ ಆನ್‌ಲೈನ್ ಕ್ಲಾಸ್ ಸೇರಿ ಇತರ ಶಾಲಾ, ಚಟುವಟಿಕೆಗಳಿಂದ ವಂಚಿತವಾಗಲು ನೆಟ್‌ವರ್ಕ್ ಇಲ್ಲದ್ದೂ ಮೂಲ ಕಾರಣವಾಗಿದೆ. ಹೀಗಾಗಿ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಗ್ರಾಮಸ್ಥರು ಗಣತಿಗೆ ಮಾಹಿತಿ ನೀಡಲು ನಿರಾಕರಿಸಿದರು. ಈ ಹಿನ್ನೆಲೆ ಗಣತಿಗೆ ತೆರಳಿದ್ದ ಅಧಿಕಾರಿಗಳು ಗ್ರಾಮದ ಘಟನೆಯನ್ನು ತಹಸೀಲ್ದಾರರಿಗೆ ವಿವರಿಸಿದರು.ಗ್ರಾಮಸ್ಥರ ಮನವೊಲಿಸಿದ ಬಳಿಕ ಮಧ್ಯಾಹ್ನದ ನಂತರ ಗ್ರಾಮದ ಶಾಲೆ ಹಾಗೂ ದೇವಸ್ಥಾನವೊಂದರಲ್ಲಿ ಗಣತಿ ಕಾರ್ಯ ಮುಂದುವರಿಯಿತು.
ಈ ವೇಳೆ ಗ್ರಾಮಸ್ಥರಾದ ಪರಶುರಾಮ ಆಡಿನ, ಶ್ರೀಧರ ಹಾಳಕೇರಿ, ಶಿವಪ್ಪ ದಿಂಡೂರ, ಶರಣಪ್ಪ ಹುಂಡಿ, ಕಲ್ಲಯ್ಯ ಮಠದ, ಬಸವರಾಜ ಹಾಳಕೇರಿ, ಶರಣಪ್ಪ ಹೂಗಾರ, ಅಂದಪ್ಪ ಹೊಸಕೇರಿ, ರವಿ ಜಿಗಳೂರ, ಪರಶುರಾಮ ಹದ್ದಣ್ಣವರ, ಈರಪ್ಪ ಲಗಳೂರ, ಸಿದ್ದಲಿಂಗಯ್ಯ ಕಲ್ಲಯ್ಯನವರಮಠ ಇತರರು ಇದ್ದರು. ನಾಗೇಂದ್ರಗಡ ಗ್ರಾಮದ ಮೊಬೈಲ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಒಂದು ದಿನದಲ್ಲಿ ಸಿಗಲ್ಲ. ಖಾಸಗಿ ನೆಟ್‌ವರ್ಕ್ ಹಾಗೂ ಬಿಎಸ್‌ಎನ್‌ಎಲ್ ಟವರ್ ಸ್ಥಾಪನೆಗೆ ಸಮಯ ಬೇಕು. ಈಗ ಗಣತಿಗೆ ಸಹಕಾರ ನೀಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದೆ. ಗ್ರಾಮಸ್ಥರು ಒಪ್ಪಿದ್ದಾರೆ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.ಸಭೆ ನಡೆಸಿದ್ದ ಡಿಸಿ ನಾಗೇಂದ್ರಗಡ ಗ್ರಾಮದಲ್ಲಿನ ನೆಟ್‌ವರ್ಕ್ ಸಮಸ್ಯೆಯಿಂದ ಸಮೀಕ್ಷೆಗೆ ತೊಂದರೆ ಆಗುತ್ತಿರುವ ಹಿನ್ನೆಲೆ ಸೆ. 28ರಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಭೇಟಿ ನೀಡಿ ಲಕ್ಕಲಕಟ್ಟಿ ಗ್ರಾಪಂನಲ್ಲಿ ಸಭೆ ನಡೆಸಿ ಚರ್ಚಿಸಿದ್ದರು. ಬಳಿಕ ನಾಗೇಂದ್ರಗಡ ಗ್ರಾಮಸ್ಥರ ಸಹಕಾರ ಪಡೆದು ಅವರನ್ನು ಲಕ್ಕಲಕಟ್ಟಿ ಗ್ರಾಪಂಗೆ ವಾಹನ ಮೂಲಕ ಕರೆದುಕೊಂಡು ಬಂದು ಗಣತಿ ಕಾರ್ಯ ಪೂರ್ಣಗೊಳಿಸಲು ಸೂಚಿಸಿದ್ದರು. ಆದರೆ ಗ್ರಾಮಸ್ಥರು ಲಕ್ಕಲಕಟ್ಟಿ ಗ್ರಾಮಕ್ಕೆ ಬರಲು ಒಪ್ಪದ ಕಾರಣ ಗ್ರಾಮದಲ್ಲಿ ವೈಫೈ ವ್ಯವಸ್ಥೆ ಮೂಲಕ ಗಣತಿಗೆ ಮುಂದಾಗಿದ್ದರು. ಆದರೆ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ನೀಡಿದ ಬಳಿಕವೇ ಮಾಹಿತಿ ಕೊಡುತ್ತೇವೆ ಎಂದು ಪಟ್ಟು ಹಿಡಿದಿದ್ದರು.