ಸಾರಾಂಶ
ನರಗುಂದ: ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ವಿವಿಧ ಭಾಷೆಯಲ್ಲಿ ನಮ್ಮ ಗ್ರಾಮೀಣ ಭಾಗದ ಜನತೆಯ ಹಾಡು, ಕಥೆಗಳಿಂದ ನಮ್ಮ ಸಂಸ್ಕೃತಿ ಮೌಲ್ಯಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ ಎಂದು ಜನಪದ ವಿದ್ವಾಂಸ ವಿಶ್ರಾಂತ ಉಪನ್ಯಾಸಕ ಹಾಗೂ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಭು ಬಳಿಗಾರ ತಿಳಿಸಿದರು.
ತಾಲೂಕಿನ ಶಿರೋಳ ಗ್ರಾಮದ ಯಚ್ಚರೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಭಕ್ತ ಹಿತಚಿಂತನ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಸೊಗಡಿನ ಹಾಡು, ಕಥೆಗಳಿಂದ ಜೀವನ ಮೌಲ್ಯ, ಗ್ರಾಮೀಣ ಜೀವನದ ಸೌಂದರ್ಯ, ಗ್ರಾಮೀಣರ ನಿಷ್ಕಪಟ ಮುಗ್ಧ ನಿರಾಡಂಬರ ಜೀವನದ ಹಿರಿಮೆಯನ್ನು ಅರಿತುಕೊಳ್ಳಲು ಸಾಧ್ಯವಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಪುಣ್ಯಾರಣ್ಯ ಪತ್ರಿವನ ಮಠದ ಡಾ. ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು ಮಾತನಾಡಿ, ಜೀವನದಲ್ಲಿ ಅಧ್ಯಾತ್ಮ, ಮಠ, ದೇವಸ್ಥಾನಗಳ ಪಾತ್ರ ದೊಡ್ಡದಿದೆ. ದೇಹದಲ್ಲಿ ಶಕ್ತಿ, ಮನಸ್ಸಿನಲ್ಲಿ ಸಾಧಿಸುವ ಛಲ ಇರುವಾಗ ಮಹಾನ್ ಸಂಗತಿಗಳ ಕುರಿತು ನಮ್ಮ ಶ್ರಮ ಹಾಗೂ ಸಮಯವನ್ನು ಉಪಯೋಗಿಸಬೇಕು ಎಂದರು.
ಚಿದಂಬರೇಶ್ವರ ಸಂಸ್ಥಾನ ಗುರ್ಲಹೊಸೂರು, ಸವದತ್ತಿ, ಗೊಣ್ಣಾಗರದ ಧರ್ಮಾಧಿಕಾರಿ ಪ್ರಸನ್ನ ಸುಂದರೇಶ ದೀಕ್ಷಿತ ಮಾತನಾಡಿ, ಭಕ್ತನ ಭಕ್ತಿ ಹಾಗೂ ಭಗವಂತನ ಕರುಣೆ ಎರಡೂ ಭಕ್ತನ ಬದುಕನ್ನು ಉದ್ಧರಿಸಿ ಮುಕ್ತಿಯ ಕಡೆಗೆ ಒಯ್ಯಲು ಸಹಾಯ ಮಾಡುತ್ತವೆ ಎಂದರು.ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ರಾಮಾಯಣ ಪ್ರಸಂಗದ ತೊಗಲುಗೊಂಬೆ ಆಟದ ಹಾಡನ್ನು ಹೇಳಿದರು.
ವಿಶ್ವಕರ್ಮ ಸಮಾಜದ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ ಪತ್ತಾರ, ಗಣ್ಯ ಉದ್ಯಮಿ ಸರ್ವೇಶ್ ಆಚಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಬ್ಬಳ್ಳಿಯ ನಾಟ್ಯಭೈರವ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರಿಂದ ಗಣೇಶ ಸ್ತುತಿ ನೃತ್ಯ ಹಾಗೂ ರೇಣುಕಾ ಯಲ್ಲಮ್ಮ ನಾಟ್ಯಗಳು ಪ್ರದರ್ಶನ ಮಾಡಿದರು.ಗವಿಮಠದ ಅಭಿನವ ಯಚ್ಚರ ಶ್ರೀಗಳು, ಜಾತ್ರಾ ಸಮಿತಿಯ ಅಧ್ಯಕ್ಷ ಎಸ್.ವೈ. ಮುಲ್ಕಿಪಾಟೀಲ, ಉಪಾಧ್ಯಕ್ಷ ಶಂಕ್ರಪ್ಪ ಕಾಡಪ್ಪನವರ, ಕಾರ್ಯದರ್ಶಿ ಶೇಖಣ್ಣ ಕಟಗೇರಿ, ಬಾಪುಗೌಡ ತಿಮ್ಮನಗೌಡ್ರ, ಸಹ ಕಾರ್ಯದರ್ಶಿ ಶ್ರೀಕಾಂತ ಉಳ್ಳಾಗಡ್ಡಿ, ಶಾರದಾ ಕುಲುಮಿ, ಮಂಜುನಾಥ ಕೊಣ್ಣೂರ, ಶ್ವೇತಾ ಮುಲ್ಕಿಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪ್ರಭಾಕರ ಉಳ್ಳಾಗಡ್ಡಿ ಸ್ವಾಗತಿಸಿದರು. ಸುನಿಲ ಕಳಸದ ನಿರೂಪಿಸಿದರು. ಶರಣಯ್ಯ ಹಿರೇಮಠ ವಂದಿಸಿದರು.