ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
‘ಯಕ್ಷರಂಗದ ರಾಜ’ ಎಂದೇ ಖ್ಯಾತರಾದ, ಹೆಸರಾಂತ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ (82) ಬುಧವಾರ ನಿಧನರಾದರು.ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ ಪೆರುವಾಯಿ ನಾರಾಯಣ ಶೆಟ್ಟರು, ಕಂಚಿನ ಧ್ವನಿ, ಶ್ರುತಿಬದ್ಧ ಮಾತು ಹಾಗೂ ಅರ್ಥಪೂರ್ಣ ಸಂಭಾಷಣೆಗೆ ಹೆಸರಾಗಿದ್ದರು.ಬಂಟ್ವಾಳ ತಾಲೂಕು ಪೆರುವಾಯಿಯ ಮದನಪ್ಪ ಶೆಟ್ಟಿ-ಅಬ್ಬಕ್ಕ ದಂಪತಿ ಪುತ್ರರಾಗಿದ್ದ ಇವರು, 12ನೇ ವಯಸ್ಸಿನಲ್ಲೇ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರು. ಮಾಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ಮಾಡಿದ ಪೆರುವಾಯಿ ನಾರಾಯಣ ಶೆಟ್ಟಿ ಅವರದು ಬಹುದೊಡ್ಡ ಸಾಧನೆ. ಅವರು ಸುಮಾರು 52 ವರ್ಷ ಗಳ ಕಾಲ ನಿರಂತರ ತಿರುಗಾಟ ನಡೆಸಿದ್ದರು. ಬಳಿಕ ಅನಾರೋಗ್ಯದಿಂದಾಗಿ ಯಕ್ಷರಂಗದಿಂದ ನಿವೃತ್ತಿ ಪಡೆದಿದ್ದರು.ಕಟೀಲುಮೇಳದ ಕಲಾವಿದರಾಗಿದ್ದ ಅವರು ನಿರ್ವಹಿಸುತ್ತಿದ್ದಾಗ ರಕ್ತಬೀಜ, ಹಿರಣ್ಯಕಷ್ಯಪು, ಕಂಸ, ಸುಂದರರಾವಣ, ಋತುಪರ್ಣ, ಹನೂಮಂತ, ಜಾಬಾಲಿ, ಅರುಣಾಸುರ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಹಲವು ಪಾತ್ರಗಳನ್ನು ಬಹಳ ಪರಿಣಾಮಕಾರಿಯಾಗಿ ರಂಗದಲ್ಲಿ ಬಿಂಬಿಸಿ ಖ್ಯಾತರಾದವರು. ಕೋಟಿ ಚೆನ್ನಯದ ಕೋಟಿ ಮೊದಲಾದ ವೇಷಗಳ ನಿರ್ವಹಣೆಯಲ್ಲಿ ‘ಪೆರುವಾಯಿ ಶೈಲಿ’ ಎಂಬ ಹೊಸ ಹಾದಿಯನ್ನು ನಿರ್ಮಿಸಿ ಪ್ರಸಿದ್ದಿಯಾಗಿದ್ದರು.2016ನೇ ಸಾಲಿನ ಚೊಚ್ಚಲ ‘ಯಕ್ಷಧ್ರುವ ಪಟ್ಲ ಪ್ರಶಸ್ತಿ’ ಸೇರಿದಂತೆ ಹಲವು ಸನ್ಮಾನ, ಪ್ರಶಸ್ತಿಗಳು ಇವರಿಗೆ ಸಂದಿದೆ.