ಸಾರಾಂಶ
ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್ ಜೋಡಿಸುವ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಷಡ್ಯಂತ್ರ್ಯ ರಾಜ್ಯದಲ್ಲಿ ತ್ವರಿತಗತಿಯಲ್ಲಿ ನಡೆದಿದೆ.
ಕಂಪ್ಲಿ: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮೂಲಕ ಖಾಸಗೀಕರಣಗೊಳಿಸಿ ವಿದ್ಯುತ್ ಶುಲ್ಕ ವಿಧಿಸಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಸ್ಥಳೀಯ ರೈತ ಸಂಘದ ಪದಾಧಿಕಾರಿಗಳು ಬಳ್ಳಾರಿ ಜೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಜೆಸ್ಕಾಂ ಎಂಡಿ ಕೆ.ರವೀಂದ್ರಗೆ ಬುಧವಾರ ಮನವಿ ಸಲ್ಲಿಸಿದರು.ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್ ಜೋಡಿಸುವ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಷಡ್ಯಂತ್ರ್ಯ ರಾಜ್ಯದಲ್ಲಿ ತ್ವರಿತಗತಿಯಲ್ಲಿ ನಡೆದಿದೆ. 2023ರ ಸೆ.22ರಿಂದ ವಿದ್ಯುತ್ ಪರಿವರ್ತಕ, ಕಂಬ, ವೈರ್, ಇತರ ಸಾಮಗ್ರಿಗಳನ್ನು ರೈತರು ಸ್ವಂತ ಖರ್ಚಿನಲ್ಲಿ ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯುವಂತೆ ಕಾನೂನು ಜಾರಿಗೊಳಿಸಲಾಗಿದೆ ಎಂದು ಆರೋಪಿಸಿದರು.
2001ರಲ್ಲಿ ರೈತರು ಹೋರಾಟ ನಡೆಸಿ ಉಚಿತ ವಿದ್ಯುತ್ ಪಡೆದಿದ್ದರು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ಕಾನೂನು ಅನುಷ್ಠಾನಗೊಳಿಸುವ ತನಕ ಉಚಿತ ವಿದ್ಯುತ್ ಸರಬರಾಜು ಹಾಗೂ ಇತರ ಕೃಷಿ ಚಟುವಟಿಕೆಗಳಿಗೆ ಸಹಾಯಧನ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು. ರೈತರಿಗೆ ವಿದ್ಯುತ್ ಪರಿವರ್ತಕ, ಕಂಬ, ವೈರ್, ಇತರ ಉಪಕರಣಗಳನ್ನು ಜೆಸ್ಕಾಂ ಉಚಿತವಾಗಿ ಒದಗಿಸಿ ವಿದ್ಯುತ್ ಸಂಪರ್ಕ ನೀಡಬೇಕು. ಮನೆ ಬಳಕೆ ವಿದ್ಯುತ್ ದರ ಕಡಿತಗೊಳಿಸಬೇಕು. ವಿದ್ಯುತ್ ಅಪಘಾತಗಳಿಗೀಡಾಗಿ ಮರಣ ಹೊಂದಿದವರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು. ಸೋಲಾರ್ ಸಂಪರ್ಕ ಹೊಂದಿರುವ ಪಂಪ್‌ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಆದೇಶ ಕೈಬಿಡಬೇಕು. ನಗರ ಹಳ್ಳಿಗಳಲ್ಲಿ ತಾರತಮ್ಯವಿಲ್ಲದೆ ಸಮಾನವಾಗಿ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ತಿಮ್ಮಪ್ಪ, ಸುಧಾಕರ, ನಾಗರಾಜ, ವಿ.ಟಿ.ರಾಜು, ಜೆಸ್ಕಾಂ ಸಿಇ ಲಕ್ಷ್ಮಣ ಚವ್ಹಾಣ, ಎಸ್‌ಇ ಶರೀಫ್ ಇದ್ದರು.