ಬೇಡ್ತಿ-ವರದಾ ನದಿ ಜೋಡಣೆಗೆ ಆಗ್ರಹಿಸಿ ಮನವಿ

| Published : Dec 08 2024, 01:19 AM IST

ಸಾರಾಂಶ

ಬೇಡ್ತಿ-ವರದಾ ನದಿ ಜೋಡಣೆ, ಹನಿ ನೀರಾವರಿ ತಾರತಮ್ಯ ನಿಲ್ಲಿಸಿ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿಗೊಳಿಸಿ ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿತು.

ಹಾನಗಲ್ಲ: ಬೇಡ್ತಿ-ವರದಾ ನದಿ ಜೋಡಣೆ, ಹನಿ ನೀರಾವರಿ ತಾರತಮ್ಯ ನಿಲ್ಲಿಸಿ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿಗೊಳಿಸಿ ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿತು.ಶನಿವಾರ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೋತಂಬರಿ, ರೈತರ ಪರ ಎಂದು ಹೇಳುವ ಸರಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರೈತರಿಗೆ ನೀರಾವರಿ ಯೋಜನೆ ಕೊಡಿ, ನಾವು ಸರಕಾರಕ್ಕೆ ಸಹಾಯ ಮಾಡುತ್ತೇವೆ. ವರದಾ ಬೇಡ್ತಿ ನದಿ ಜೋಡಣೆಯಿಂದ ೪ ಜಿಲ್ಲೆಗಳ ರೈತರಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಇಂತಹ ಜನಪರ ಯೋಜನೆಗಳಿಗೆ ವಿಳಂಬವಿಲ್ಲದೆ ಅನುದಾನ ಒದಗಿಸಿ ಕಾಮಾಗಾರಿ ಮಾಡಿ ರೈತ ಪರ ಸರಕಾರ ಎಂದು ಹೆಸರು ಪಡೆಯಲಿ. ಇಂದು ಅಂತರ್ಜಲ ಉಳಿಸುವ ದೊಡ್ಡ ದೊಡ್ಡ ಭಾಷಣ ಮಾಡುವ ನಾಯಕರು, ಸರಕಾರದ ಪ್ರತಿನಿಧಿಗಳು ಹನಿ ನೀರಾವರಿ ಯೋಜನೆಯಲ್ಲಿ ತಾರಮತ್ಯ ಮಾಡುತ್ತಿರುವುದು ವಿಷಾದನಿಯ. ಹನಿ ನೀರಾವರಿಯನ್ನು ರೈತರು ಪಡೆಯಲಾಗದಂತೆ ಯೋಜನೆಗಳನ್ನು ಹೆಸರಿಗೆ ಮಾತ್ರ ಪ್ರಕಟ ಮಾಡುವುದು ಸರಿ ಅಲ್ಲ. ರೈತರಿಗೆ ಯೋಜನೆಗಳನ್ನು ಸಮುದಾಯದ ಹೆಸರಿನಲ್ಲಿ ನೀಡುವುದು ಬೇಡ. ರೈತರೆಲ್ಲರೂ ಒಂದೇ ಸಮುದಾಯ ಎಂದು ಪರಿಗಣಿಸಿ. ಕೃಷಿ ಇಲಾಖೆ ತುಂತುರು ನೀರಾವರಿಗಳನ್ನು ಬೆಸೆದು ರೈತರನ್ನು ದಾರಿ ತಪ್ಪಿಸುವುದು ಬೇಡ. ಅಂತರ್ಜಲ ಉಳಿಸಲು ಹನಿ ನೀರಾವರಿ ಅತ್ಯಂತ ಸೂಕ್ತ ಮಾರ್ಗ. ರೈತರಿಗೆ ಯಥೇಚ್ಛವಾಗಿ ಈ ಯೋಜನೆ ನೀಡಲು ಸರಕಾರ ಮುಂದಾಗಲಿ ಎಂದರು.ಇದರೊಂದಿಗೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ, ಕೂಸನೂರ ಏತ ನೀರಾವರಿ ಆರಂಭಿಸಿ, ರೈತರ ಪಂಪಸೆಟ್‌ಗಳಿಗೆ ಮೊದಲಿನಂತೆ ಉಚಿತ ವಿದ್ಯುತ್ ಪೂರೈಸಿ, ಹಾನಗಲ್ಲ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಒತ್ತುವರಿಯಾದ ಜಮೀನು ಕಾನೂನು ಬಾಹೀರವಾಗಿ ಮತ್ತೆ ಉಳುಮೆಗೆ ನೀಡಿರುವುದನ್ನು ಹಿಂಪಡೆಯಿರಿ. ಉತಾರದಲ್ಲಿನ ಸರಕಾರ ಸರಕಾರಿ ಸಮಸ್ಯೆ ಬಗೆಹರಿಸಿರಿ. ಕೆರೆಗಳ ಆಕ್ರಮ ಒತ್ತುವರಿ ತೆರವುಗೊಳಿಸಿ. ಸಾಲಕ್ಕಾಗಿ ರೈತರ ಆಸ್ತಿ, ಟ್ರ್ಯಾಕ್ಟರ್ ಜಪ್ತಿ ನಿಲ್ಲಿಸಿ. ಅತಿವೃಷ್ಟಿಗೆ ಹಾಳಾದ ಪ್ರದೇಶದ ರೈತರಿಗೆ ಸಾಲ ಮನ್ನಾ ನೀಡಿ ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ, ತಾಲೂಕು ಅಧ್ಯಕ್ಷ ಸದಾನಂದಗೌಡ ಪಾಟೀಲ, ರೈತರ ಮುಖಂಡರಾದ ಪ್ರಕಾಶ ಮಾಸಣಗಿ, ಬಸು ಗಾಣಿಗೇರ, ಹನುಮಂತಪ್ಪ ಕೋಣಕೊಪ್ಪ, ನಾರಾಯಣ ಈಳಿಗೇರ, ಮಲಕಪ್ಪ ಕೋತಂಬರಿ, ಪ್ರಭು ಕಡಕೋಳ ಮೊದಲಾದವರು ಈ ಸಂದರ್ಭದಲ್ಲಿದ್ದರು.