ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಾನುವಾರುಗಳ ಮೇವು ಹಾಗೂ ನೀರಿನ ಕೊರತೆಯಿಂದ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ರೈತರಿಗೆ ನೀಡುವ ಹಾಲಿನ ಖರೀದಿ ದರವನ್ನು ಹೆಚ್ಚಿಸುವಂತೆ ಅಖಿಲ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ರೈತ ಮುಖಂಡರು ಒತ್ತಾಯಿಸಿದ್ದಾರೆ.
ಹಾವೇರಿ: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಾನುವಾರುಗಳ ಮೇವು ಹಾಗೂ ನೀರಿನ ಕೊರತೆಯಿಂದ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ರೈತರಿಗೆ ನೀಡುವ ಹಾಲಿನ ಖರೀದಿ ದರವನ್ನು ಹೆಚ್ಚಿಸುವಂತೆ ಅಖಿಲ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ರೈತ ಮುಖಂಡರು ಒತ್ತಾಯಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದಿವೀಗಿಹಳ್ಳಿ ನೇತೃತ್ವದಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಅವರಿಗೆ ಸೋಮವಾರ ಮನವಿ ಸಲ್ಲಿಸಿ, ಹೈನುಗಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಆಗ್ರಹಿಸಿದರು.ಈ ವೇಳೆ ಮಾತನಾಡಿದ ಹನುಮಂತಪ್ಪ ದಿವೀಗಿಹಳ್ಳಿ, 2026ರ ಮುಂಗಾರು ಮಳೆ ಕೊರತೆಯಿಂದ ರಾಜ್ಯ ಸರ್ಕಾರ 156 ತಾಲೂಕುಗಳನ್ನು ಬರಗಾಲ ತಾಲೂಕುಗಳೆಂದು ಘೋಷಿಸಿದೆ. ಮಳೆ ಕೊರತೆಯಿಂದ ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ, ಮಾರುಕಟ್ಟೆಯಲ್ಲಿ ಮೇವಿನ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಾಗುತ್ತಿರುವುದರಿಂದ ಹೈನುಗಾರಿಕೆ ನಿರ್ವಹಿಸುವುದು ರೈತರಿಗೆ ಹೊರೆಯಾಗಿದೆ ಎಂದು ಅಳಲು ತೋಡಿಕೊಂಡರು.
ಹೈನುಗಾರಿಕೆಯನ್ನೇ ಅವಲಂಬಿಸಿರುವ ಸಣ್ಣ ಹಾಗೂ ಮಧ್ಯಮ ವರ್ಗದ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಕುಡಿಯುವ ನೀರಿಗೂ ಹೆಚ್ಚಿನ ಹಣ ಪಾವತಿಸುವ ಪರಿಸ್ಥಿತಿ ಇದೆ. ಆದರೆ ಹಾಲು ಉತ್ಪಾದನೆಗೆ ತಗಲುವ ವೆಚ್ಚಕ್ಕೆ ಅನುಗುಣವಾಗಿ ರೈತರಿಗೆ ಸೂಕ್ತ ದರ ದೊರೆಯುತ್ತಿಲ್ಲ. 2025ರ ಏಪ್ರಿಲ್ 1ರಿಂದ ಫ್ಯಾಟ್ ಆಧಾರದ ಮೇಲೆ ರೈತರಿಗೆ ಪ್ರತಿ ಲೀಟರ್ ಹಾಲಿಗೆ 33.25ರಿಂದ 39.25 ರು.ವರೆಗೆ ದರ ದೊರೆಯುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ದರ ರೈತರಿಗೆ ಸಮರ್ಪಕವಾಗಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಪ್ರತಿ ಲೀಟರ್ ಹಾಲಿಗೆ 5 ಪ್ರೋತ್ಸಾಹಧನ ಹೆಚ್ಚಿಸುವುದರ ಜತೆಗೆ, ಹಾಲಿನ ಖರೀದಿ ದರವನ್ನು ಪರಿಷ್ಕರಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ವೇಳೆ ಮುಖಂಡರಾದ ಹರೀಶ ಮೇಲ್ಮುರಿ, ಬಸವರಾಜ ಟಿ.ಕೆ., ಶಿವಪ್ಪ ಜವನ್ನವರ, ಮಾಲತೇಶ ಹೊಲಬಿಕೊಂಡ, ಕಾಂತೇಶ ಪೂಜಾರ, ಮಂಜುನಾಥ ಮರಡೂರ ಸೇರಿದಂತೆ ಅನೇಕರು ಹಾಜರಿದ್ದರು.