ಸಾರಾಂಶ
ಬ್ಯಾಡಗಿ: ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದ ಅರ್ಜಿಗಳು ಕಸದ ತೊಟ್ಟಿಯಲ್ಲಿ ಲಭ್ಯವಾಗಿದ್ದು ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಇರುವಂತಹ ನೈಜ ಕಾಳಜಿ ತೋರುತ್ತದೆ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ಪರಿಹಾರ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಚಾಮರಾಜನಗರದ ಜನಸ್ಪಂದನದಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದರು. ಆದರೆ ಸೌಜನ್ಯಕ್ಕೂ ಕೂಡ ಸಲ್ಲಿಸಿದ ಅರ್ಜಿಗಳನ್ನು ನೋಡದೇ ಕಸದ ತೊಟ್ಟಿಯಲ್ಲಿ ಹಾಕಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆರೋಪಿಸಿದರು.ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ: ಬರಗಾಲ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡದಿರುವ ರಾಜ್ಯ ಸರ್ಕಾರ ರೈತರಿಗೆ ಮೋಸವೆಸಗಿದೆ, ಈ ಕುರಿತು ಹಲವಾರು ಬಾರಿ ಹೋರಾಟ ಮಾಡಿ ಗಮನಕ್ಕೆ ತಂದರೂ ಸಹ ಪ್ರಯೋಜನವಾಗಿಲ್ಲ. ಕಳೆದ ಎರಡು ವರ್ಷದಿಂದ ರೈತರು ಎಂತಹ ಸಂಕಷ್ಟದಲ್ಲಿ ತೊಡಗಿದ್ದಾರೆ ಎಂಬುದು ಸ್ವತಃ ರೈತನಾಗಿದ್ದರೆ ಸಿದ್ದರಾಮಯ್ಯ ಅವರಿಗೆ ಅರ್ಥವಾಗುತ್ತಿತ್ತು ರಾಜ್ಯದಲ್ಲಿ ರೈತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಕಸದ ಬುಟ್ಟಿಗೆ ಹಾಕುವ ಕಾಲ ಸನ್ನಿಹಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಬಹುದೊಡ್ಡ ಹಗರಣಗಳ ರೂವಾರಿ, ವಾಲ್ಮೀಕಿ ನಿಗಮದ 188 ಕೋಟಿ ರು.ಗಳನ್ನು ಗುಳುಂ ಮಾಡಿದ್ದಲ್ಲದೇ, ಸ್ವತಃ ತಮ್ಮ ಪತ್ನಿಯ ಹೆಸರಿನಲ್ಲಿ 75 ಸಾವಿರ ಅಡಿಗಳಷ್ಟು ಮುಡಾ ನಿವೇಶನಗಳನ್ನು ಹೊಂದುವ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ, ಇಂತಹ ಭ್ರಷ್ಟ ಸರ್ಕಾರ ಹಾಗೂ ಮುಖ್ಯಮಂತ್ರಿಯನ್ನು ರೈತರೆಲ್ಲರೂ ಸೇರಿ ಕಸದ ಬುಟ್ಟಿಗೆ ಹಾಕುವ ಕಾಲ ಸನ್ನಿಹಿತವಾಗಿದೆ ಎಂದರು.ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ:ರೈತರ ಅರ್ಜಿಗಳನ್ನು ಕಸದ ತೊಟ್ಟಿಯಲ್ಲಿ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಇಲ್ಲದೇ ಹೋದಲ್ಲಿ ಸರ್ಕಾರದ ವಿರುದ್ದ ಹೋರಾಟ ಅನಿವಾರ್ಯ ಎಂದು ಎಚ್ಚರಿದ ಅವರು, ಇನ್ನೊಮ್ಮ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುವಂತೆ ಒತ್ತಾಯಿಸಿದರು.