ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ತ್ಯಾಗರಾಜನಗರದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಬಿಜಿಎಸ್ ಬ್ಲೂಮ್‌ಫೀಲ್ಡ್ ಶಾಲೆ ಮುಚ್ಚಲು ಸರ್ಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆಗೆ ಆದೇಶಿಸುವಂತೆ ಕೋರಿ ಸಲ್ಲಿಸಿರುವ ತಕರಾರು ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ (ಪಿಐಎಲ್) ಹೈಕೋರ್ಟ್ ಪರಿವರ್ತಿಸಿದೆ.ನಕ್ಷೆ ಮಂಜೂರಾತಿ ಇಲ್ಲದೆ ಹಾಗೂ ಪ್ರವಾಹದ ನೀರು ಹರಿಯುವ ಸ್ಥಳದಲ್ಲಿ ಶಾಲಾ ಕಟ್ಟಡ ನಿರ್ಮಿಸಿರುವ ಹಿನ್ನೆಲೆಯಲ್ಲಿ ಕಟ್ಟಡ ಕೆಡವಲು ಬಿಬಿಎಂಪಿ ಆದೇಶಿಸಿದೆ. ಈ ಆದೇಶ ಯಾವಾಗಬೇಕಾದರೂ ಜಾರಿಗೆ ಬರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ಶಾಲೆಯನ್ನು ಮುಚ್ಚಲು ಸರ್ಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ವಕೀಲೆ ಸುಧಾ ಕಾಟವಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ, ಅರ್ಜಿಯನ್ನು ಪರಿಶೀಲಿಸಿದರೆ ಪ್ರಕರಣದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಭಾರೀ ಪ್ರಮಾಣದ ಹಿತಾಸಕ್ತಿ ಅಡಗಿರುವುದು ಕಂಡುಬರುತ್ತಿದೆ. ಆದ್ದರಿಂದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಯಾಗಿ ಪರಿವರ್ತಿಸುವುದು ಸೂಕ್ತ. ಅದರಂತೆ ಅರ್ಜಿಯನ್ನು ಸಂಬಂಧಪಟ್ಟ ವಿಭಾಗೀಯ ಪೀಠದ ಮುಂದೆ ಹೆಚ್ಚಿನ ವಿಚಾರಣೆಗೆ ನಿಗದಿಪಡಿಸಬೇಕು ಎಂದು ರಿಜಿಸ್ಟ್ರಿಗೆ ಸೂಚಿಸಿ ಇತ್ತೀಚೆಗೆ ಆದೇಶಿಸಿದೆ.
ಬಿಬಿಎಂಪಿ ವಾರ್ಡ್-154ರ ವ್ಯಾಪ್ತಿಯ ತ್ಯಾಗರಾಜನಗರದ 4ನೇ ಅಡ್ಡರಸ್ತೆಯಲ್ಲಿ ತಮ್ಮ ನಿವೇಶನದಲ್ಲಿ ವಾಸದ ವಸತಿ ಹಾಸ್ಟೆಲ್ ನಿರ್ಮಾಣಕ್ಕೆ ಪಿ.ಸುನಿತಾ ಎಂಬುವವರು ನಕ್ಷೆ ಮಂಜೂರಾತಿ ಪಡೆದುಕೊಂಡಿದ್ದಾರೆ. ಆದರೆ, ಸಹಾಯಕ ಅಭಿಯಂತರ ಪರಿಶೀಲನೆ ವೇಳೆ ನಕ್ಷೆ ಮಂಜೂರಾತಿ, ಬಿಬಿಎಂಪಿ ಬೈಲಾ ಉಲ್ಲಂಘಿಸಿ ವಸತಿ ಹಾಸ್ಟೆಲ್ ಬದಲು ವಾಣಿಜ್ಯ ಉದ್ದೇಶಕ್ಕಾಗಿ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಆದ್ದರಿಂದ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡವನ್ನು ಕೆಡವಿಹಾಕಬೇಕು ಎಂದು 2023ರ ಡಿ.27ರಂದು ಬಿಬಿಎಂಪಿ ಆದೇಶಿಸಿತ್ತು.ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿದಾರರು, ಬಿಬಿಎಂಪಿ ಆದೇಶ ಯಾವಾಗಬೇಕಾದರೂ ಜಾರಿಗೆ ಬರಲಿದೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಿಂದ ಸುರಕ್ಷತೆಯಿಂದ ಶಾಲೆಯನ್ನು ಮುಚ್ಚಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು. ಅರ್ಜಿದಾರರ ಪರ ವಕೀಲ ಎಸ್.ಉಮಾಪತಿ ವಾದ ಮಂಡಿಸಿದ್ದರು.