ಶಿಕ್ಷಕರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ತಹಸೀಲ್ದಾರ್ ಮನವಿ ಸಲ್ಲಿಕೆ

| Published : Aug 08 2024, 01:36 AM IST

ಶಿಕ್ಷಕರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ತಹಸೀಲ್ದಾರ್ ಮನವಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

2017ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಪ್ರಧಾನವನ್ನು ಬದಲಿಸಿ ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ವಿಶೇಷ ರಾಜ್ಯ ಪತ್ರವನ್ನು ಜಾರಿಗೆ ತರಲಾಗಿದೆ. ಇದು ಶಿಕ್ಷಕರಿಗೆ ಮಾಡಿರುವ ಘೋರ ಅನ್ಯಾಯವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮುಂಬಡ್ತಿ ನೀಡದೇ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2017 ರಿಂದ ಆಗಿರುವ ಅನ್ಯಾಯ ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷ ಪದ್ಮೇಶ್ ನೇತೃತ್ವದಲ್ಲಿ ಶಿಕ್ಷಕರು ತಹಸೀಲ್ದಾರ್ ಆದರ್ಶ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಪದ್ಮೇಶ್, 2017ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಪ್ರಧಾನವನ್ನು ಬದಲಿಸಿ ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ವಿಶೇಷ ರಾಜ್ಯ ಪತ್ರವನ್ನು ಜಾರಿಗೆ ತರಲಾಗಿದೆ. ಇದು ಶಿಕ್ಷಕರಿಗೆ ಮಾಡಿರುವ ಘೋರ ಅನ್ಯಾಯವಾಗಿದೆ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಪೈಕಿ ಪದವಿ ಹಾಗೂ ಸ್ನಾತಕೋತರ ಮತ್ತು ಬಿಎಡ್ ವ್ಯಾಸಂಗ ಮಾಡಿರುವ ಸಾವಿರಾರು ಶಿಕ್ಷಕರುಗಳು ಈ ನಿರ್ಧಾರದಿಂದ ಆತಂಕಗೊಂಡಿದ್ದಾರೆ. ಶಿಕ್ಷಕರು ಬಡ್ತಿಯನ್ನು ಹೊಂದದೆ ಕೇವಲ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

30 ರಿಂದ 34 ವರ್ಷಗಳಿಗೂ ಹೆಚ್ಚಿನ ಸೇವೆ ಸಲ್ಲಿಸಿದ್ದರೂ ಅವರಿಗೆ ಒಂದೇ ಒಂದು ಮುಂಬಡ್ತಿ ನೀಡದೇ ನಿವೃತ್ತರಾಗುವ ಸನ್ನಿವೇಶ ನಿರ್ಮಾಣವಾಗಿದೆ. ಕೂಡಲೇ ಈ ನಿರ್ಧಾರವನ್ನು ಕೈ ಬಿಟ್ಟು ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಆ.12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಆದರ್ಶ್ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಟಿ.ಲಕ್ಷ್ಮಣಗೌಡ, ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ಸಂಧ್ಯಾರಾಣಿ, ತಾಲೂಕು ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜು, ತಾಲೂಕು ಸಂಘದ ನಿರ್ದೇಶಕರಾದ ಪವಿತ್ರ, ವಾಣಿ, ಇಂದ್ರಾಣಿ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ಪಧವೀಧರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜೇಗೌಡ, ಪೂರ್ಣಚಂದ್ರತೇಜಸ್ವಿ, ಶಿಕ್ಷಕರಾದ ಕಿರಣ್‌ಕುಮಾರ್, ಕಟ್ಟೆಮಹೇಶ್, ಎ.ಕೆ.ದೇವರಾಜು, ರಂಗಸ್ವಾಮಿ, ಉದೇಶ್ ಗೌಡ, ಎ.ಎಚ್.ಯೋಗೇಶ್ ಸೇರಿದಂತೆ ನೂರಾರು ಶಿಕ್ಷಕರು ಹಾಜರಿದ್ದರು.