ಸಾರಾಂಶ
ಧಾರವಾಡ: ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಕೇತರ ನೌಕರರ ಸಂಘ ಮತ್ತು ಕವಿವಿ ಶಿಕ್ಷಕೇತರ ನೌಕರರ ಸಂಘಗಳ ಸದಸ್ಯರು ಜಂಟಿಯಾಗಿ ಕುಲಸಚಿವರ ಮೂಲಕ ರಾಜ್ಯಪಾಲರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕರ್ನಾಟಕದ ವಿವಿಯಲ್ಲಿ ಪ್ರಸ್ತುತ 2,800ಕ್ಕೂ ಹೆಚ್ಚು ಅಧ್ಯಾಪಕರ ಹುದ್ದೆಗಳು ಮತ್ತು ಸುಮಾರು 5000ಕ್ಕೂ ಹೆಚ್ಚು ಶಿಕ್ಷಕೇತರ ಹುದ್ದೆಗಳು ಖಾಲಿ ಇದ್ದು, ಈ ಸಿಬ್ಬಂದಿಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ಶಿಕ್ಷಣದ ಗುಣಮಟ್ಟದ ಮೇಲೆ ಗಂಭೀರ ದುಷ್ಪರಿಣಾಮ ಬೀರಿದೆ. ಸರಿಯಾದ ಶಿಕ್ಷಣ ಪದ್ಧತಿ ಸ್ಥಾಪಿಸಲು ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ತಡಮಾಡದೆ ಸೂಕ್ತ ಕ್ರಮ ಕೈಗೊಳ್ಳುವುದು. ವಿವಿ ನೌಕರರಿಗೆ ಅಗತ್ಯ ಆರೋಗ್ಯ ಸೇವೆಯು ನೀಡುತ್ತಿಲ್ಲ. ಸರ್ಕಾರವು ಈ ಸೌಲಭ್ಯ ವಿವಿ ಸಿಬ್ಬಂದಿಗಳಿಗೂ ವಿಸ್ತರಿಸಬೇಕು ಆಗ್ರಹ ಪಡಿಸಿದರು.ನಿವೃತ್ತ ಶಿಕ್ಷಕರು ಮತ್ತು ಶಿಕ್ಷಕೇತರ ನೌಕರರಿಗೆ ತಮ್ಮ ಪಿಂಚಣಿ ನಿಯಮಿತವಾಗಿ ಬರುತ್ತಿಲ್ಲ. ಇದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಪಿಂಚಣಿ ಪಾವತಿಯಲ್ಲಿ ವಿಳಂಬವು ನಿವೃತ್ತರಿಗೆ ಅನಾವಶ್ಯಕ ಕಷ್ಟ ತರುತ್ತಿದೆ. ಇನ್ನು, ಸರ್ಕಾರಿ ನೌಕರರಿಗೆ ಇರುವಂತೆ ವಿವಿ ನೌಕರರಿಗೂ ಕೆಎಟಿ ವ್ಯವಸ್ಥೆ ಮಾಡಬೇಕು. ಗುತ್ತಿಗೆ ಆಧಾರಿತ, ಹೊರ ಗುತ್ತಿಗೆ ಮತ್ತು ದಿನಗೂಲಿ ನೌಕರರಿಗೂ ಸಮಕೆಲಸಕ್ಕೆ ಸಮಾನ ವೇತನ ನೇರವಾಗಿ ನೌಕರರಿಗೆ ವಿವಿಯಿಂದ ಪಾವತಿ ಮತ್ತು ವಿವಿ ತಾಂತ್ರಿಕ ಮತ್ತು ತಾಂತ್ರಿಕೇತರ ನೌಕರರಿಗೆ ಸಿ ಆಂಡ್ ಆರ್ ನಿಯಮಾವಳಿಗಳನ್ನು ರೂಪಿಸಬೇಕೆಂದು ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ಕವಿವಿ ಶಿಕ್ಷೇತರರ ಎರಡು ಸಂಘನೆಗಳ ಪದಾಧಿಕಾರಿಗಳಾದ ಎ.ಎಸ್. ಕಲ್ಲೋಳಿಕರ, ಮಲ್ಲಿಕಾರ್ಜುನ ಮೆಣಸಿನಕಾಯಿ, ಎ.ಕೆ. ಮಲ್ಲಿಗವಾಡ, ಎಚ್.ಎಫ್. ಮಾಳಮ್ಮನವರ, ಗಣೇಶ ಕಂದರಗಿ, ಉಮೇಶ ತಳವಾರ, ಹಂಪಮ್ಮ ಮಾದರ, ಪ್ರಕಾಶ, ಉಮೇಶ, ಕಲ್ಮೇಶ, ಸುಭಾಷ್, ಮಂಜುನಾಥ ರಾಜು ಸೇರಿದಂತೆ ಕವಿವಿ ಎಸ್.ಸಿ-ಎಸ್.ಟಿ ಶಿಕ್ಷಕೇತರ ನೌಕರರ ಸಂಘ ಮತ್ತು ಕವಿವಿ ಶಿಕ್ಷಕೇತರ ನೌಕರರ ಸಂಘದ ಪದಾಧಿಕಾರಿಗಳು ಸದಸ್ಯರು ಇದ್ದರು.