ಕುಮಟಾ ತಾಲೂಕಿನ ಗೋಕರ್ಣ ವ್ಯಾಪ್ತಿಯ ಗಂಗೆಕೊಳ್ಳದ ನಿವಾಸಿಗಳು ಕಳೆದ 40 ವರ್ಷಗಳಿಂದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದು, ಸೋಮವಾರ ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದರು.

40 ವರ್ಷಗಳಿಂದ ಹಕ್ಕುಪತ್ರ, ಮೂಲಭೂತ ಸೌಲಭ್ಯದಿಂದ ಗಂಗೆಕೊಳ್ಳದ ನಿವಾಸಿಗಳು ವಂಚಿತ

ಕನ್ನಡಪ್ರಭ ವಾರ್ತೆ ಕಾರವಾರ

ಕುಮಟಾ ತಾಲೂಕಿನ ಗೋಕರ್ಣ ವ್ಯಾಪ್ತಿಯ ಗಂಗೆಕೊಳ್ಳದ ನಿವಾಸಿಗಳು ಕಳೆದ 40 ವರ್ಷಗಳಿಂದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದು, ಸೋಮವಾರ ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದರು.

ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ.129 ಮತ್ತು 130 ರಲ್ಲಿ ಸುಮಾರು 45 ಕುಟುಂಬಗಳು ಕಳೆದ 35-40 ವರ್ಷಗಳಿಂದ ವಾಸಿಸುತ್ತಿವೆ. ಈ ನಿವಾಸಿಗಳು ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಮತದಾರರ ಗುರುತಿನ ಚೀಟಿಯಂತಹ ಎಲ್ಲಾ ಅಧಿಕೃತ ದಾಖಲೆಗಳನ್ನು ಹೊಂದಿದ್ದರೂ, ಇಂದಿಗೂ ಅವರಿಗೆ ಭೂಮಿಯ ಮಾಲೀಕತ್ವದ ಹಕ್ಕುಪತ್ರ ನೀಡಿಲ್ಲ. ಜಿಲ್ಲೆಯು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿದಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತದೆ, ಆದರೆ ನಮ್ಮ ಪ್ರದೇಶದ ಜನರು ಇಂದಿಗೂ ಕನಿಷ್ಠ ಸೌಲಭ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಇದೇ ಪ್ರದೇಶದ 26 ಮನೆಗಳಿಗೆ ಅತಿಕ್ರಮಣ ಸಕ್ರಮಗೊಳಿಸಿ ಆರ್‌ಟಿಸಿ ಹಾಗೂ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ, ಉಳಿದ 16 ಕುಟುಂಬಗಳನ್ನು ವಿನಾಕಾರಣ ಕಡೆಗಣಿಸಲಾಗಿದ್ದು, ಅವರಿಗೆ ಹಕ್ಕುಪತ್ರ ನೀಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಇದರಿಂದಾಗಿ ಸರ್ಕಾರಿ ಯೋಜನೆಗಳಿಂದ ಈ ಬಡ ಕುಟುಂಬಗಳು ವಂಚಿತವಾಗಿವೆ.

ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲಿಷಾ ಜಿ.ಯಲಕಪಾಟಿ ಮಾತನಾಡಿ, ಬಡ ನಿವಾಸಿಗಳನ್ನು ಕಡೆಗಣಿಸದೆ, ಕೂಡಲೇ ಉಳಿದ 16 ಕುಟುಂಬಗಳ ಅತಿಕ್ರಮಣವನ್ನು ಸಕ್ರಮಗೊಳಿಸಬೇಕು. ತುರ್ತಾಗಿ ಹಕ್ಕುಪತ್ರ ವಿತರಿಸಿ, ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ನಾಗು ಕೆ., ಮೆಹಬೂಬ್ ಇನಾಮ್ದಾರ್, ರೂಪೇಶ್ ಗುನಗಿ, ವೀಣಾ ನಾಯ್ಕ, ನಾಗರಾಜ್ ಗೌಡ ಸೇರಿದಂತೆ ಗಂಗೆ ಕೊಳ್ಳದ ನಿವಾಸಿಗಳು ಇದ್ದರು.