ಸಾರಾಂಶ
ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಜಿಲ್ಲಾ ವೀರಶೈವ ಪಂಚಮ ಸಾಲಿ ಸಮಾಜದ ಮುಖಂಡರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೂಡಲ ಸಂಗಮ ಪ್ರಥಮ ಜಗದ್ಗುರು ಶ್ರೀ ಬಸವ ಮೃತ್ಯುಂಜಯ ಸ್ವಾಮಿ ನೇತೃತ್ವದ ಪಂಚಮಸಾಲಿ ಮೀಸಲಾತಿಗೆ ಒತ್ತಾಯಿಸಿ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ಶಿವಮೊಗ್ಗ ಶಾಖೆ ವತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಪಂಚಮಸಾಲಿ ಲಿಂಗಾಯಿತರಿಗೆ ಮಿಸಲಾತಿಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲಿ ಪ್ರತಿಭಟನೆಗಾರರ ಮೇಲೆ ನಡೆದ ಪೊಲೀಸರ ಲಾಠಿಚಾರ್ಜ್‌ನಿಂದಾಗಿ ಹಲವಾರು ಮಂದಿ ಪ್ರತಿಭಟನಕಾರರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಮಾರಣಾಂತಿಕ ಹಲ್ಲೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಹೋರಾಟದ ನೇತೃತ್ವ ವಹಿಸಿದ್ದ ಶ್ರೀಗಳ ಕ್ಷಮೆಯನ್ನು ಸರ್ಕಾರ ಕೋರಬೇಕು. ಹೋರಾಟಗಾರರ ಮೇಲೆ ಹಾಕಲಾದ ಕೇಸನ್ನು ವಾಪಸ್ಸು ಪಡೆಯಬೇಕು, ಮಾತ್ರವಲ್ಲದೆ ಸಿದ್ದರಾಮಯ್ಯನವರನ್ನು ಕೂಡ ಸಿಎಂ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ಮುಖಂಡರಾದ ಎಚ್.ವಿ.ಮಹೇಶ್ವರಪ್ಪ, ಜಿ.ಮಾಲತೇಶಪ್ಪ, ಎನ್.ಎಸ್.ಕುಮಾರ್, ಕೆ.ಆರ್.ವೀರೇಶ್, ಮಂಜುನಾಥ್, ವಿಜಯಕುಮಾರ್, ನಂಜುಂಡಪ್ಪ, ಬಸವರಾಜಪ್ಪ, ವಿಶ್ವೇಶ್ವರಯ್ಯ, ಎಂ. ದೇವೇಂದ್ರಪ್ಪ, ಡಿ.ಆರ್. ಕೃಷ್ಣಪ್ಪ ಮೊದಲಾದವರು ಇದ್ದರು.