ಬಿಜೆಪಿ ಆಡಳಿತ ರಾಜ್ಯಗಳಿಗಿಂತ ನಮ್ಮಲ್ಲೇ ಪೆಟ್ರೋಲ್‌ ಅಗ್ಗ: ಸಿಎಂ

| Published : Jun 18 2024, 12:52 AM IST / Updated: Jun 18 2024, 11:19 AM IST

ಬಿಜೆಪಿ ಆಡಳಿತ ರಾಜ್ಯಗಳಿಗಿಂತ ನಮ್ಮಲ್ಲೇ ಪೆಟ್ರೋಲ್‌ ಅಗ್ಗ: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳು ಹಾಗೂ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು :  ’ಪೆಟ್ರೋಲ್-ಡೀಸೆಲ್ ಮೇಲಿನ ಮಾರಾಟ ತೆರಿಗೆ ತಲಾ 3 ರು. ಮಾತ್ರ ಹೆಚ್ಚಳವಾಗಿದೆ. ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳು ಹಾಗೂ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಜತೆಗೆ 2015 ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅರ್ಧಕ್ಕರ್ಧ ಕಡಿಮೆ ಆದಾಗಲೂ ಅದರ ಲಾಭವನ್ನು ದೇಶದ ಜನರಿಗೆ ನೀಡದೆ ಮೋದಿ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಹೋಗಿತ್ತು. ತನ್ಮೂಲಕ ಲಕ್ಷಾಂತರ ಕೋಟಿ ಹಣ ಬಡವರಿಂದ ಸಂಗ್ರಹಿಸಿತ್ತು. ಈ ಬಗ್ಗೆ ಮಾತನಾಡದ ಬಿಜೆಪಿ ನಾಯಕರಿಗೆ ಈಗ ಪ್ರಶ್ನಿಸುವ ನೈತಿಕತೆಯಿಲ್ಲ. ಪ್ರಶ್ನಿಸುವುದಾದರೆ ಕೇಂದ್ರವನ್ನು ಪ್ರಶ್ನಿಸಲಿ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2014ರಿಂದ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು ನಾಲ್ಕು ಪಟ್ಟು ಹಾಗೂ ಡೀಸೆಲ್‌ ಮೇಲಿನ ಸುಂಕವನ್ನು ಬರೋಬ್ಬರಿ ಹತ್ತು ಪಟ್ಟು ಹೆಚ್ಚಳ ಮಾಡಿದ್ದಾರೆ ಎಂದು ಅಂಕಿ-ಅಂಶ ಬಿಚ್ಚಿಟ್ಟರು.

ನರೇಂದ್ರ ಮೋದಿ ಪ್ರಧಾನಮಂತ್ರಿ ಆದಾಗ ಜೂ. 2014 ರಂದು ಪೆಟ್ರೋಲ್‌ ಅಬಕಾರಿ ಸುಂಕ ಪ್ರತಿ ಲೀಟರ್‌ಗೆ 9.48 ರು. ಮಾತ್ರ ಇತ್ತು. ಇದನ್ನು 2020ರ ಮೇ ವೇಳೆಗೆ ಬರೋಬ್ಬರಿ 32.98 ರು.ಗಳಿಗೆ ಹೆಚ್ಚಳ ಮಾಡಿದರು. ಇನ್ನು ಜೂ.2014ಕ್ಕೆ ಕೇವಲ ಪ್ರತಿ ಲೀಟರ್‌ ಡೀಸೆಲ್‌ ಮೇಲೆ 3.56 ರು.ಗಳಷ್ಟಿದ್ದ ಅಬಕಾರಿ ಸುಂಕವನ್ನು 2020ರ ಮೇ ವೇಳೆಗೆ ಬರೋಬ್ಬರಿ 31.83 ರು.ಗೆ ಹೆಚ್ಚಳ ಮಾಡಿದರು. ಬಳಿಕ 2022ರ ಮೇ ತಿಂಗಳಲ್ಲಿ ಪರಿಷ್ಕರಣೆಯಾಗಿದ್ದರೂ, ಈಗಲೂ ದುಬಾರಿಯಾಗಿಯೇ ಇದೆ ಎಂದು ಅಂಕಿ-ಅಂಶಗಳ ಸಹಿತ ಉತ್ತರ ನೀಡಿದರು.

ಯುಪಿಎ ಸರ್ಕಾರದ ಅವಧಿಯ ಪೆಟ್ರೋಲ್‌, ಡೀಸೆಲ್‌ ಬೆಲೆ ಟೀಕಿಸಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗುವ ಮೊದಲು ಪೆಟ್ರೋಲ್ ಬೆಲೆ‌ (ಮುಂಬೈ) ಪ್ರತಿ ಲೀಟರ್‌ಗೆ 72.26 ರು., ಡೀಸೆಲ್‌ 57.28 ರು. ಇತ್ತು. ಈ ವೇಳೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ 113 ಡಾಲರ್‌ ಇತ್ತು.

ಇದೀಗ ಜೂ.2024ಕ್ಕೆ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 82.35 ಡಾಲರ್ ಮಾತ್ರ ಇದೆ. ಆದರೆ ಪೆಟ್ರೋಲ್‌ 104.21 ರು. ಹಾಗೂ ಡೀಸೆಲ್‌ 92.15 ರು. ಆಗಿದೆ. ಎಲ್‌ಪಿಜಿ 410 ರು.ಗಳಿಂದ ದರ ಇಳಿಸಿದ ಬಳಿಕವೂ 805 ರು. ಇದೆ. ನರೇಂದ್ರ ಮೋದಿ ಅವರ ಈ ಲೂಟಿ ಬಗ್ಗೆ ಯಾಕೆ ಬಿಜೆಪಿಯವರು ಪ್ರಶ್ನಿಸುತ್ತಿಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಡೀಸೆಲ್‌ 3.50 ರು. ಹೆಚ್ಚಳ ಆಗಿದೆ ಎಂದು ಅಪಪ್ರಚಾರ ಆಗುತ್ತಿದೆ. ನಾವು ಪೆಟ್ರೋಲ್‌, ಡೀಸೆಲ್‌ ತಲಾ 3 ರು. ಮಾತ್ರ ಹೆಚ್ಚಳ ಮಾಡಿದ್ದೇವೆ. ಈ ದರಗಳು ಹೆಚ್ಚಾದ ಹೊರತಾಗಿಯೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ದರಗಳು ಕಡಿಮೆ ಇವೆ ಎಂದರು.

ಜನಸಾಮಾನ್ಯರಿಗೆ ಹೊರೆ ಆಗಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಅಚ್ಚೇ ದಿನ್‌ ಆಯೇಗಾ ಎಂದು ಬಂದವರು ಬೆಲೆ ಏರಿಕೆ ಮೂಲಕ ಶೋಷಣೆ ಮಾಡಿದರು. ಈಗಲೂ ಮಾಡುತ್ತಿದ್ದಾರೆ. ಇನ್ನು ನಾವು ಚುನಾವಣೆಗೆ ಮೊದಲು ತೆರಿಗೆ ಹಾಕಲ್ಲ ಎಂದು ಹೇಳಿಲ್ಲ. ಅಂದಾಜು ಮೂರು ಸಾವಿರ ಕೋಟಿ ರು. ರಾಜ್ಯದ ಖಜಾನೆಗೆ ಸಂದಾಯವಾಗುತ್ತದೆ. ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ ಅದು ನಮ್ಮ ಜೇಬಿಗೆ ಹೋಗುವುದಿಲ್ಲ ಎಂದು ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಪ್ರತಿಯೊಂದು ಯೋಜನೆಗಳಲ್ಲಿಯೂ 40% ತೆರಿಗೆ ಹಣ ಬಿಜೆಪಿ ನಾಯಕರ ಜೇಬಿಗೆ ಹೋಗುತ್ತಿತ್ತು. ಈ ರೀತಿ ಅಂದಾಜು ಒಂದುವರೆ ಲಕ್ಷ ಕೋಟಿ ರೂಪಾಯಿಗಳಷ್ಟು ರಾಜ್ಯದ ಜನರ ಬೆವರಗಳಿಕೆಯ ತೆರಿಗೆ ಹಣವನ್ನು ಈ ಬಿಜೆಪಿ ನಾಯಕರ ತಮ್ಮ ಜೇಬಿಗೆ ತುಂಬಿಸಿಕೊಂಡಿದ್ದಾರೆ. ಇಂತಹ ಲೂಟಿಕೋರ, ಭ್ರಷ್ಟ, ಜನವಿರೋಧಿ ಬಿಜೆಪಿ ನಾಯಕರಿಗೆ ಜನಕಲ್ಯಾಣಕ್ಕಾಗಿ ಸ್ಪಲ್ಪ ಪ್ರಮಾಣದ ತೆರಿಗೆ ಹೆಚ್ಚಿಸಿದ್ದನ್ನು ಪ್ರಶ್ನಿಸುವ ಯೋಗ್ಯತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಕೇಂದ್ರದ ಅಬಕಾರಿ ಸುಂಕ

ವರ್ಷ ಲೀಟರ್‌ ಪೆಟ್ರೋಲ್‌ ಮೇಲಿನ ಸುಂಕ ಡೀಸೆಲ್‌ ಮೇಲಿನ ಸುಂಕ

2014 ಜೂನ್‌ 9.48 ರು. 3.56 ರು.

2020 ಮೇ 32.98 ರು. 31.83 ರು.

==

ರಾಜ್ಯ ಪೆಟ್ರೋಲ್‌ ದರ ಡೀಸೆಲ್‌ ದರ (ಪ್ರತಿ ಲೀಟರ್‌ಗೆ)

ಕರ್ನಾಟಕ (ದರ ಹೆಚ್ಚಳ ಬಳಿಕ) 102.85 88.94

ತಮಿಳುನಾಡು 102.84 94.41

ಕೇರಳ 106.66 95.60

ಆಂಧ್ರಪ್ರದೇಶ 109.44 97.29

ತೆಲಂಗಾಣ 107.40 95.64

ಮಹಾರಾಷ್ಟ್ರ 104.46 91.01

ರಾಜಸ್ತಾನ 104.86 90.95

ಮಧ್ಯಪ್ರದೇಶ 106.86 91.84

ಗುಜರಾತ್‌ 94.44 90.21