ಸಾರಾಂಶ
ಅಂಬೇಡ್ಕರ್ ವೃತ್ತದ ಸಮೀಪ ಬಿಜೆಪಿ,ಜೆಡಿಎಸ್ ಪ್ರತಿಭಟನೆ । ಆಟೋ ರಿಕ್ಷಾಗೆ ಹಗ್ಗ ಕಟ್ಟಿ ವಿನೂತನ ಮೆರವಣಿಗೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರದೇಶದಲ್ಲಿ ಬಿಜೆಪಿ ಸರ್ಕಾರ ಇರುವ ಎಲ್ಲಾ ರಾಜ್ಯದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದ್ದರೆ ಕಾಂಗ್ರೆಸ್ ಪಕ್ಷ ಇರುವ ಎಲ್ಲಾ ರಾಜ್ಯಗಳಲ್ಲಿ ಏರಿಕೆ ಕಂಡಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪಿಸಿದರು.
ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು. ಯಡಿಯೂರಪ್ಪ, ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪೆಟ್ರೋಲ್, ಡೀಸೆಲ್ ಗೆ 7 ರು. ತೆರಿಗೆ ಕಡಿಮೆ ಮಾಡಲಾಗಿತ್ತು. ಅರುಣಾಚಲ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಲ್ಲಿಗಿಂತ 10 ರು. ಕಡಿಮೆ ಇದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಾದರೆ ಅಗತ್ಯ ವಸ್ತುಗಳ ಬೆಲೆ, ಆಟೋ ದರ, ಬಸ್ಸಿನ ದರ ಏರಿಕೆಯಾಗಲಿದೆ. ಇದರ ನೇರ ಹೊಡೆತ ಬಡವರ ಮೇಲೆ ಬೀಳಲಿದೆ. ಸರ್ಕಾರ ತಕ್ಷಣ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಸಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಭರವಸೆ ಮೇಲೆ ಗೆದ್ದು ಸರ್ಕಾರ ರಚನೆ ಮಾಡಿದೆ. ಶೃಂಗೇರಿ ಕ್ಷೇತ್ರದಲ್ಲೂ ಗ್ಯಾರಂಟಿ ಭರವಸೆ ನೀಡಿದ್ದರಿಂದ ಕಾಂಗ್ರೆಸ್ ಶಾಸಕರು ಗೆದ್ದಿದ್ದು ನಾನು ಸೋತಿದ್ದೇನೆ. ಆದ್ದರಿಂದ ಕೊಟ್ಟ ಭರವಸೆಯಂತೆ ಗ್ಯಾರಂಟಿ ನೀಡಬೇಕು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯ ಅವರು ಅನೇಕ ಬಾರಿ ಅರ್ಥ ಸಚಿವರಾಗಿ ದಾಖಲೆ ರೀತಿ ಬಜೆಟ್ ಮಂಡಿಸಿದವರು. ಗ್ಯಾರಂಟಿ ಕೊಡಲು ಸಾಧ್ಯವಾಗ ದಿದ್ದರೆ ಮತದಾರರಿಗೆ ಏಕೆ ಅಶ್ವಾಸನೆ ನೀಡಬೇಕಾಗಿತ್ತು ? ಎಂದು ಪ್ರಶ್ನಿಸಿದರು. ಮೋದಿ ಸರ್ಕಾರ ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲ್ ಹಾಗೂ ಡೀಸೆಲ್ ತರಬೇಕು ಎಂದು ಸಲಹೆ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲಾ ಭಾಗ್ಯ ನೀಡುತ್ತೇನೆ ಎಂದು ಘೋಷಣೆ ಮಾಡಿದೆ. ಆದರೆ, ಇನ್ನೊಂದು ಕಡೆ ಪೆಟ್ರೋಲ್, ಡೀಸೆಲ್ ಏರಿಸಿದೆ. ಸ್ಟಾಂಪ್ ಪೇಪರ್ 20 ರು. ಯಿಂದ 100ಕ್ಕೆ ದರ ಏರಿಸಿದೆ. 500 ರು. ಸ್ಟಾಂಪ್ ಪೇಪರ್ 1000 ಆಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಜಂಟಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಲಿದೆ ಎಂದರು.ಜೆಡಿಎಸ್ ಪಕ್ಷದ ಮುಖಂಡ ಇ.ಸಿ.ಸೇವಿಯಾರ್ ಮಾತನಾಡಿ, ಪೆಟ್ರೋಲ್,ಡೀಸೆಲ್ ದರ ಏರಿಕೆ ವಿರುದ್ಧ ಹೋರಾಟ ಕೇವಲ ಬಿಜೆಪಿ, ಜೆಡಿಎಸ್ ಹೋರಾಟ ಮಾತ್ರ ಆಗಿರದೆ ಜನಾಂದೋಲನ ಆಗಬೇಕಾಗಿದೆ. ಮತದಾರರು ಗ್ಯಾರಂಟಿ ಕೊಡಿ ಎಂದು ಕೇಳಿರಲಿಲ್ಲ. ಕಾಂಗ್ರೆಸ್ ಪಕ್ಷವೇ ಗ್ಯಾರಂಟಿ ಘೋಷಣೆ ಮಾಡಿ ಚುನಾವಣೆಯಲ್ಲಿ ಗೆದ್ದಿದೆ. ಈಗ ಮತ್ತೊಂದು ಕೈಯಲ್ಲಿ ಬೆಲೆ ಏರಿಕೆ ಮಾಡಿ ಜನರಿಂದ ಹಣ ಕಸಿಯುತ್ತಿದೆ ಎಂದು ಟೀಕಿಸಿದರು.
ಪ್ರತಿಭಟನೆ ಸಭೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಉಪೇಂದ್ರ, ದಿವಾಕರ, ಬಿಜೆಪಿ ಪಕ್ಷದ ಮುಖಂಡ ರಾದ ನೀಲೇಶ್, ಎನ್.ಎಂ.ಕಾಂತರಾಜ್, ಆಶೀಶ್ ಕುಮಾರ್, ಪರ್ವೀಜ್, ಎಚ್.ಡಿ.ಲೋಕೇಶ್, ಎ.ಬಿ. ಮಂಜುನಾಥ್, ಸುರಭಿ ರಾಜೇಂದ್ರ, ವಿಜಯಕುಮಾರ್, ಅಶ್ವನ್, ಎಂ.ಎನ್.ನಾಗೇಶ್, ಶ್ರೀನಾಥ್, ಕೆಸವಿ ಮಂಜುನಾಥ್, ವೈ.ಎಸ್.ರವಿ, ಎನ್.ಡಿ.ಪ್ರಸಾದ್, ಮಡಬೂರು ಪ್ರವೀಣ್ ಮತ್ತಿತರರು ಇದ್ದರು.-- ಬಾಕ್ಸ್---
ಪ್ರತಿಭಟನೆ ಸಭೆ ನಂತರ ಮಾಜಿ ಸಚಿವ ಡಿ.ಎನ್.ಜೀವರಾಜ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಮುಖಂಡರು ಆಟೋ ರಿಕ್ಷಾಕ್ಕೆ ಹಗ್ಗ ಕಟ್ಟಿ ಅಂಬೇಡ್ಕರ್ ವೃತ್ತದಿಂದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಆಟೋ ರಿಕ್ಷಾ ಎಳೆದು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.