ಬಹುತೇಕ ನೌಕರರು ತಮ್ಮ ಕುಟುಂಬದ ಆರ್ಥಿಕ ಅಗತ್ಯಗಳಿಗಾಗಿ ಪಿಎಫ್ ಹಣವನ್ನು ಅವಲಂಬಿಸಿರುವುದರಿಂದ, ತುರ್ತು ಸಂದರ್ಭಗಳಲ್ಲಿ ತಮ್ಮದೇ ಖಾತೆಯಲ್ಲಿರುವ ಹಣವನ್ನು ಪಡೆಯಲು ಎದುರಾಗುತ್ತಿರುವ ಸಮಸ್ಯೆಗಳು ನೌಕರರಿಗೆ ಹೆಚ್ಚಿನ ಸಂಕಷ್ಟ ತಂದೊಡ್ಡುತ್ತಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಪಿಎಫ್‌ಗೆ ಸಂಬಂಧಿಸಿದ ನಿಯಮಗಳು ನೌಕರರಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು ಹಾಗೂ ಹಣ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭವಾರ್ತೆ ಅರಸೀಕೆರೆ
ಕೇಂದ್ರ ಸರ್ಕಾರದ ಪಿಎಫ್ ನೀತಿಗಳಿಂದ ನೌಕರರಿಗೆ ಅನಾನುಕೂಲ ಉಂಟಾಗುತ್ತಿದೆ ಎಂದು ಆರೋಪಿಸಿ ನಗರದ ಹೊರವಲಯದಲ್ಲಿರುವ ಅರವಿಂದ್ ಗಾರ್ಮೆಂಟ್ಸ್‌ನ ನೌಕರರು ಗುರುವಾರ ಕೆಲಸ ಸ್ಥಗಿತಗೊಳಿಸಿ ಸಂಸ್ಥೆ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಪಿಎಫ್‌ಗೆ ಸಂಬಂಧಿಸಿದ ನಿಯಮಗಳು ಹಾಗೂ ಪ್ರಕ್ರಿಯೆಗಳಿಂದ ನೌಕರರಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು. ನೌಕರರ ವೇತನದಿಂದ ಪ್ರತಿತಿಂಗಳು ಪಿಎಫ್‌ಗಾಗಿ ಕಡಿತವಾಗುವ ಮೊತ್ತ, ಪಿಎಫ್ ಖಾತೆಗೆ ಹಣ ಜಮೆಯಾಗುವ ವಿಧಾನ ಹಾಗೂ ಅಗತ್ಯ ಸಂದರ್ಭದಲ್ಲಿ ಪಿಎಫ್ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯಲ್ಲಿ ಗೊಂದಲ ಹಾಗೂ ವಿಳಂಬ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಬಹುತೇಕ ನೌಕರರು ತಮ್ಮ ಕುಟುಂಬದ ಆರ್ಥಿಕ ಅಗತ್ಯಗಳಿಗಾಗಿ ಪಿಎಫ್ ಹಣವನ್ನು ಅವಲಂಬಿಸಿರುವುದರಿಂದ, ತುರ್ತು ಸಂದರ್ಭಗಳಲ್ಲಿ ತಮ್ಮದೇ ಖಾತೆಯಲ್ಲಿರುವ ಹಣವನ್ನು ಪಡೆಯಲು ಎದುರಾಗುತ್ತಿರುವ ಸಮಸ್ಯೆಗಳು ನೌಕರರಿಗೆ ಹೆಚ್ಚಿನ ಸಂಕಷ್ಟ ತಂದೊಡ್ಡುತ್ತಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಪಿಎಫ್‌ಗೆ ಸಂಬಂಧಿಸಿದ ನಿಯಮಗಳು ನೌಕರರಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು ಹಾಗೂ ಹಣ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನೌಕರರು ಭಾಗವಹಿಸಿ ತಮ್ಮ ಅಹವಾಲುಗಳನ್ನು ವ್ಯಕ್ತಪಡಿಸಿದರು. ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ಭೇಟಿ:ಪ್ರತಿಭಟನೆಯ ವಿಷಯ ತಿಳಿದು ಗ್ರೇಡ್-2 ತಹಸೀಲ್ದಾರ್ ಅಶೋಕ್ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿ ಶಶಿಕಲಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತ ನೌಕರರ ಅಹವಾಲುಗಳನ್ನು ಆಲಿಸಿದರು. ಪಿಎಫ್‌ಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ನೌಕರರು ಎದುರಿಸುತ್ತಿರುವ ತೊಂದರೆಗಳ ಕುರಿತು ಮಾಹಿತಿ ಪಡೆದುಕೊಂಡರು.
ನೌಕರರು ಸಲ್ಲಿಸಿರುವ ಸಮಸ್ಯೆಗಳನ್ನು ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದು, ನಿಯಮಾನುಸಾರ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ನೌಕರರು ಪ್ರತಿಭಟನೆಯನ್ನು ಹಿಂಪಡೆದರು.