ರಾಜಾರಾಮ್ ಮೋಹನ್ ರಾಯ್ ರಸ್ತೆಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಬಿ-ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ)ಯ ₹70 ಕೋಟಿ ಹಣ ದುರ್ಬಳಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಆ ಸಂಸ್ಥೆಯ ಲೆಕ್ಕಾಧಿಕಾರಿ ಬಿ.ಎಲ್. ಜಗದೀಶ್ ಕೊನೆಗೆ ಶುಕ್ರವಾರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಾರಾಮ್ ಮೋಹನ್ ರಾಯ್ ರಸ್ತೆಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಬಿ-ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ)ಯ ₹70 ಕೋಟಿ ಹಣ ದುರ್ಬಳಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಆ ಸಂಸ್ಥೆಯ ಲೆಕ್ಕಾಧಿಕಾರಿ ಬಿ.ಎಲ್. ಜಗದೀಶ್ ಕೊನೆಗೆ ಶುಕ್ರವಾರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.ಬಳಿಕ ಆತನನ್ನು ನ್ಯಾಯಾಲಯವು ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಏಳು ದಿನಗಳು ಸಿಐಡಿ ಕಸ್ಟಡಿಗೆ ನೀಡಿ ಆದೇಶಿಸಿದೆ. ಇಪಿಎಸ್‌ಬಿ ಅವ್ಯವಹಾರ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆ ಸಂಸ್ಥೆಯ ಅಧ್ಯಕ್ಷ ಮುರಳೀಧರ್ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಗೋಪಿನಾಥ್ ಹಾಗೂ ಸಿಬ್ಬಂದಿ ಲಕ್ಷ್ಮೀ ಬಂಧನವಾಗಿತ್ತು. ಈ ಹಗರಣ ಬೆಳಕಿಗೆ ಬಂದ ಕೂಡಲೇ ಲೆಕ್ಕಾಧಿಕಾರಿ ಜಗದೀಶ್ ಸೇರಿದಂತೆ ಇತರರು ತಲೆಮರೆಸಿಕೊಂಡಿದ್ದರು. ಬಳಿಕ ಅವ್ಯವಹಾರ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿತ್ತು. ಅಂತೆಯೇ ತನಿಖೆಗಿಳಿದ ಸಿಐಡಿ, ಪ್ರಮುಖ ಆರೋಪಿ ಜಗದೀಶ್ ಪತ್ತೆಗೆ ಹುಡುಕಾಟ ನಡೆಸಿತ್ತು. ಈ ಬಂಧನ ಭೀತಿಯಿಂದ ನ್ಯಾಯಾಲಯಕ್ಕೆ ಬಂದು ಆರೋಪಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಲೆಕ್ಕಾಧಿಕಾರಿ ಜಗದೀಶ್ ಮನೆ ಮೇಲೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ದುಬಾರಿ ಮೌಲ್ಯದ ಏಳು ಕಾರುಗಳು, 12 ಬೈಕ್‌ಗಳು ಹಾಗೂ 1 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿತ್ತು. ಅಲ್ಲದೆ ಅವ್ಯವಹಾರಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸಂಸ್ಥೆಯಲ್ಲಿ 21 ಸಾವಿರ ರು ಮಾಸಿಕ ವೇತನಕ್ಕೆ ದುಡಿಯುತ್ತಿದ್ದ ಜಗದೀಶ್, ಇಪಿಎಫ್‌ಬಿ ಭಾರಿ ಅವ್ಯವಹಾರ ನಡೆಸಿ ಕೋಟಿಗಟ್ಟಲೇ ಹಣ ನುಂಗಿದ್ದ ಆಪಾದನೆ ಹೊತ್ತಿದ್ದಾನೆ.ಹೀಗೆ ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಅಲ್ಲದೆ ವಿದೇಶದಲ್ಲಿ ಸಹ ಕಾನೂನುಬಾಹಿರವಾಗಿ ಜಗದೀಶ್ ಹಣ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದೆ.
