ಮಂಡ್ಯದಲ್ಲಿ ನಾಳೆಯಿಂದ ಸಸ್ಯಕಾಶಿಯಲ್ಲಿ ಫಲ ಪುಪ್ಪ ಪ್ರದರ್ಶನ

| Published : Jan 25 2024, 02:08 AM IST

ಮಂಡ್ಯದಲ್ಲಿ ನಾಳೆಯಿಂದ ಸಸ್ಯಕಾಶಿಯಲ್ಲಿ ಫಲ ಪುಪ್ಪ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ವರ್ಷ ಫಲಪುಷ್ಪ ಪ್ರದರ್ಶನವನ್ನು ವಿಭಿನ್ನ ಮತ್ತು ವಿಶೇಷ ರೀತಿಯಲ್ಲಿ ಮೂಡಿಬರುವಂತೆ ಆಯೋಜಿಸುತ್ತಿದ್ದು, ಈ ಸಾಲಿನಲ್ಲಿ ಮತ್ತಷ್ಟು ಮೆರುಗು ಹಾಗೂ ವಿಶೇಷತೆಗಳೊಂದಿಗೆ ಒಟ್ಟು ಐದು ದಿನಗಳ ಕಾಲ ನಡೆಯಲಿದೆ. ಕಾವೇರಿ ಉದ್ಯಾನವನದಲ್ಲಿ ಮನಸೂರೆಗೊಳಲ್ಳುವ ವಿವಿಧ ಬಣ್ಣದ ಹೂ, ಅಲಂಕಾರಿಕ ಕುಂಡಗಳ ಜೋಡಣೆ, ವಿವಿಧ ತರಕಾರಿ ಬೆಳೆಗಳು, ಪೌಷ್ಟಿಕ ಕೈತೋಟ ಮಾದರಿ, ಇಕೆಬನ ಹಾಗೂ ತರಕಾರಿ ಕೆತ್ತೆ ಪ್ರದರ್ಶನ, ಜಿಲ್ಲೆಯ ತೋಟಗಾರಿಕೆ ಬೆಳೆಗಳ ವೈವಿಧ್ಯಮಯ ಮಾದರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯತೋಟಗಾರಿಕೆ ಇಲಾಖೆಯ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಜ.೨೬ರಿಂದ ಜ.೩೦ರವರೆಗೆ ಐದು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಹೇಳಿದರು.

ಬುಧವಾರ ನಗರದ ಕಾವೇರಿ ಉದ್ಯಾನವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಫಲಪುಷ್ಪ ಪ್ರದರ್ಶನವನ್ನು ವಿಭಿನ್ನ ಮತ್ತು ವಿಶೇಷ ರೀತಿಯಲ್ಲಿ ಮೂಡಿಬರುವಂತೆ ಆಯೋಜಿಸುತ್ತಿದ್ದು, ಈ ಸಾಲಿನಲ್ಲಿ ಮತ್ತಷ್ಟು ಮೆರುಗು ಹಾಗೂ ವಿಶೇಷತೆಗಳೊಂದಿಗೆ ಒಟ್ಟು ಐದು ದಿನಗಳ ಕಾಲ ನಡೆಯಲಿದೆ ಎಂದರು.

ಕಾವೇರಿ ಉದ್ಯಾನವನದಲ್ಲಿ ಮನಸೂರೆಗೊಳಲ್ಳುವ ವಿವಿಧ ಬಣ್ಣದ ಹೂ, ಅಲಂಕಾರಿಕ ಕುಂಡಗಳ ಜೋಡಣೆ, ವಿವಿಧ ತರಕಾರಿ ಬೆಳೆಗಳು, ಪೌಷ್ಟಿಕ ಕೈತೋಟ ಮಾದರಿ, ಇಕೆಬನ ಹಾಗೂ ತರಕಾರಿ ಕೆತ್ತೆ ಪ್ರದರ್ಶನ, ಜಿಲ್ಲೆಯ ತೋಟಗಾರಿಕೆ ಬೆಳೆಗಳ ವೈವಿಧ್ಯಮಯ ಮಾದರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು.

ವಿಶೇಷಗಳೇನು?

ಫಲಪುಷ್ಪ ಪ್ರದರ್ಶನದಲ್ಲಿ ೨೫ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಪಟೊನಿಯಾ, ಆಂಟಿರೈನಂ, ಸಾಲ್ವಿಯಾ, ಸೆಲೋಶಿಯಾ, ಮಾರಿಗೋಲ್ಡ್, ಜೀನಿಯಾ, ಸೇವಂತಿಗೆ, ಗುಲಾಬಿ, ಪಾಯ್ನಿಸೆಟಿಯಾ ಮತ್ತು ಇತರೆ ವರ್ಣದ ೨೦ ಸಾವಿರಕ್ಕೂ ಹೆಚ್ಚು ಅಲಂಕಾರಿಕ ಹೂವಿನ ಕುಂಡಗಳನ್ನು ವಿವಿಧ ವಿನ್ಯಾಸಗಳಲ್ಲಿ ಜೋಡಣೆ ಮಾಡಿ ಪ್ರದರ್ಶಿಸಲಾಗುವುದು. ಚಂದ್ರಯಾನ-೩, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ನಿತ್ಯ ಸಚಿವ ಕೆ.ವಿ.ಶಂಕರಗೌಡರ ಕಲಾಕೃತಿಯನ್ನು ಸಿರಿಧಾನ್ಯದಲ್ಲಿ ನಿರ್ಮಿಸಿ ಪ್ರದರ್ಶಿಸಲಾಗುವುದು ಎಂದರು.

ಅನ್ನದಾತ ಮಾದರಿಯಲ್ಲಿ ಇಲಾಖೆಯಿಂದ ಎತ್ತಿನಗಾಡಡಿ, ಹಸು ಮತ್ತು ರೈತರ ಕಲಾಕೃತಿಗಳು, ಶಾಂತಿಧೂತ, ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಅಯೋಧ್ಯೆ, ಶ್ರೀರಾಮ, ಶ್ರೀಆಂಜನೇಯ, ಹಿಮಾಲಯದಲ್ಲಿ ಶಿವ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು.

ಆಕರ್ಷಕ ಬೋನ್ಸಾಯ್ ಜೋಡಣೆ:

ಜಿಲ್ಲೆಯ ನೋಂದಾಯಿತ ಬೋನ್ಸಾಯ್ ಕ್ಲಬ್ ಸದಸ್ಯರು ಅಭಿವೃದ್ಧಿಪಡಿಸಿರುವ ವಿವಿಧ ಬಗೆಯ ಫೈಕಸ್ ಮತ್ತು ಇತರೆ ಹಣ್ಣಿನ ಜಾತಿಯ ಬೋನ್ಸಾಯ್ ಗಿಡಗಳ ಜೋಡಣೆ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ನುರಿತ ತರಕಾರಿ ಕೆತ್ತನೆ ತಜ್ಞರಾದ ಹರೀಶ್ ಬ್ರಹ್ಮಾವರ್ ಮತ್ತು ತಂಡದವರಿಂದ ಕಲ್ಲಂಗಡಿ, ಕುಂಬಳ, ಕ್ಯಾರೆಟ್ ಮತ್ತು ಇತರೆ ತರಕಾರಿಗಳಲ್ಲಿ ವಿವಿಧ ಆಕೃತಿಗಳನ್ನು ಕೆತ್ತನೆ ಮಾಡಿ ಅಲಂಕಾರಿಕವಾಗಿ ಜೋಡಣೆ ಮಾಡಲಾದ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಇಕೆಬನ/ಹೂ ಜೋಡಣೆ:

ವಿವಿಧ ಮಾದರಿಯ ಅಲಂಕಾರಿಕ ಕುಂಡಗಳು ಮತ್ತು ಫೋಮ್ ಬಳಸಿ ಗುಲಾಬಿ, ಸೇವಂತಿಗೆ, ಕಾರ್ನೇಶನ , ಲೆಲ್ಲೇಸ್, ಬರ್ಡ್ ಆಫ್ ಪ್ಯಾರಡೈಸ್, ಜರ್ಬೇರಾ ಮತ್ತು ಇತರೆ ಹೂಗಳನ್ನು ಅಲಂಕಾರಿಕ ಮತ್ತು ವೈವಿಧ್ಯಮಯವಾಗಿ ಜೋಡಣೆ ಮಾಡಿ ಪ್ರದರ್ಶನ ಏರ್ಪಡಿಸಲಾಗಿದೆ.

ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಶೀರ್ಷಿಕೆಯಡಿ ಕೃಷಿ ಇಲಾಖೆ ಆತ್ಮ ಯೋಜನೆಯಡಿ ಜಿಲ್ಲೆಯ ರೈತ ಉತ್ಪಾದಕರ ಕಂಪನಿಗಳು ಅಭಿವೃದ್ಧಿಪಡಿಸಿದ ಬ್ರಾಂಡ್‌ಗಳನ್ನು ಜಿಲ್ಲೆಯ ಗ್ರಾಹಕರಿಗೆ ಪರಿಚಯಿಸುವ ದೃಷ್ಟಿಯಿಂದ ರೈತ ಉತ್ಪಾದಕ ಕಂಪನಿಗಳ ಬೆಲ್ಲ, ರಾಗಿ, ಅಕ್ಕಿ, ಮತ್ತು ಇತರೆ ಉತ್ಪನ್ನಗಳ ರೀಟೇಲ್ ಬ್ರಾಂಡ್ ಮೇಳವನ್ನು ಆಯೋಜಿಸಲಾಗುತ್ತಿದೆ.

ಜಿಲ್ಲೆಯ ಸ್ವಸಹಾಯ ಗುಂಪುಗಳು ಹಾಗೂ ನಲ್ಮ್ ಯೋಜನೆಯಡಿ ನುರಿತ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಸದಸ್ಯರು ಅಭಿವೃದ್ಧಿಪಡಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೃಷಿ ಇಲಾಖೆ ವತಿಯಿಂದ ಸಂಕ್ರಾಂತಿ ಸುಗ್ಗಿ, ಬೆಲ್ಲದ ಪರಿಷೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ವಿವಿಧ ಅಲಂಕಾರಿಕ ಮೀನುಗಳ ಪ್ರದರ್ಶನ ಏರ್ಪಡಿಸಲಾಗಿದೆ.