ಪೂರ್ಣಿಮಾ ರವಿ ಸಾಕ್ಷ್ಯಚಿತ್ರಕ್ಕೆ ಫಾಲ್ಕೆ ಚಲನಚಿತ್ರೋತ್ಸವ ವಿಶೇಷ ಪ್ರಶಸ್ತಿ

| Published : May 02 2024, 12:18 AM IST

ಪೂರ್ಣಿಮಾ ರವಿ ಸಾಕ್ಷ್ಯಚಿತ್ರಕ್ಕೆ ಫಾಲ್ಕೆ ಚಲನಚಿತ್ರೋತ್ಸವ ವಿಶೇಷ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕಿ ಪೂರ್ಣಿಮಾ ರವಿ ಹಾಗೂ ಕಾರ್ಯಕಾರಿ ನಿರ್ಮಾಪಕ ರವಿ ನಾರಾಯಣ ಪ್ರಶಸ್ತಿ ಸ್ವೀಕರಿಸಿದರು. ವಿಶ್ವದಾದ್ಯಂತದಿಂದ ಸುಮಾರು ೭೦೦ ಚಲನ ಚಿತ್ರಗಳು ಈ ಚಲನ ಚಿತ್ರೋತ್ಸವಕ್ಕೆ ನಾಮಕರಣಗೊಂಡಿದ್ದವು.

ಕನ್ನಡಪ್ರಭ ವಾರ್ತೆ ಪುತ್ತೂರು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ಸಂಶೋಧಕಿ ಪೂರ್ಣಿಮಾ ರವಿ ನಿರ್ದೇಶಿಸಿರುವ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯ ಚಲನಚಿತ್ರಕ್ಕೆ ಪ್ರತಿಷ್ಠಿತ 14 ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ 2024ದಲ್ಲಿ ವಿಶೇಷ ಪ್ರಶಸ್ತಿ (ಸ್ಪೆಶಲ್‌ ಫೆಸ್ಟಿವಲ್‌ ಮೆನ್ಶನ್ ಅವಾರ್ಡ್‌) ಲಭಿಸಿದೆ.

ಮಂಗಳವಾರ ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕಿ ಪೂರ್ಣಿಮಾ ರವಿ ಹಾಗೂ ಕಾರ್ಯಕಾರಿ ನಿರ್ಮಾಪಕ ರವಿ ನಾರಾಯಣ ಪ್ರಶಸ್ತಿ ಸ್ವೀಕರಿಸಿದರು. ವಿಶ್ವದಾದ್ಯಂತದಿಂದ ಸುಮಾರು ೭೦೦ ಚಲನ ಚಿತ್ರಗಳು ಈ ಚಲನ ಚಿತ್ರೋತ್ಸವಕ್ಕೆ ನಾಮಕರಣಗೊಂಡಿದ್ದವು.

ಈ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯ ಚಲನಚಿತ್ರದಲ್ಲಿ ಕರ್ನಾಟಕದ ಸುಮಾರು 40 ಕ್ಕೂ ಹೆಚ್ಚು ದೇವದಾಸಿಯರ ಜೀವನದ ವ್ಯಥೆ, ಅವರ ಕನಸುಗಳು, ಅನಿಷ್ಟ ಪದ್ಧತಿ ಸಮಾಜದಿಂದ ತೊಲಗಲು ಆಗಬೇಕಿರುವ ಪರಿವರ್ತನೆಗಳ ಬಗ್ಗೆ ಚರ್ಚಿಸಲಾಗಿದೆ.

ಪೂರ್ಣಿಮಾ ರವಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಕಾಲೇಜಿನ ಇಂಗ್ಲಿಷ್ ಸಹ ಪ್ರಾಧ್ಯಾಪಕಿ ಡಾ. ನಯನಾ ಕಶ್ಯಪ್ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ. ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ.

ಸಾಕ್ಷ್ಯಚಿತ್ರ ತಂಡ: ಚಂದ್ರಶೇಖರ ಹೆಗ್ಡೆ (ಸಂಗೀತ ನಿರ್ದೇಶಕ), ರಕ್ಷಿತ್ ರೈ (ಸಂಕಲನ), ನಿಹಾಲ್ ನೂಜಿಬೈಲ್ (ಡಿಒಪಿ), ಸುನೀತಾ ಪ್ರವೀಣ್ (ಗಾಯಕಿ), ಸ್ವರ್ಣಶ್ರೀ ಪಟ್ಟೆ (ಗೀತರಚನೆಕಾರ), ಪ್ರವೀಣ್ ವರ್ಣಕುಟೀರ (ಸೃಜನಾತ್ಮಕ ಸಲಹೆಗಾರ), ಅಲೋಕ್ ನೂಜಿಬೈಲು (ಸೃಜನಾತ್ಮಕ ಪಾಲುದಾರ).