ಹನುಮಸಾಗರ ಪಟ್ಟಣದ ಅಂಬಾಭವಾನಿ ಸಮುದಾಯ ಭವನದಲ್ಲಿ ಗುರುವಾರ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ನಡೆಯಿತು. ಫಾರ್ಮಸಿಸ್ಟ್‌ಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಹನುಮಸಾಗರ: ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಔಷಧಿ ವ್ಯಾಪಾರಿಗಳು ಹಾಗೂ ಫಾರ್ಮಸಿಸ್ಟ್‌ಗಳ ಪಾತ್ರ ಮಹತ್ವದ್ದಾಗಿದೆ, ತುರ್ತು ಸಂದರ್ಭಗಳಲ್ಲಿ ಮಾನವೀಯತೆ ಹಾಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಔಷಧಿ ವ್ಯಾಪಾರಿಗಳ ಸೇವೆ ಶ್ಲಾಘನೀಯ ಎಂದು ಸಿಪಿಐ ವಿಶ್ವನಾಥ ಹಿರೇಗೌಡರ ಹೇಳಿದರು.
ಪಟ್ಟಣದ ಅಂಬಾಭವಾನಿ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಔಷಧಿ ವ್ಯಾಪಾರಿಗಳು ಕೇವಲ ವ್ಯಾಪಾರೀಕರಣದ ದೃಷ್ಟಿಕೋನದಿಂದ ವೃತ್ತಿ ನಿರ್ವಹಿಸದೆ, ರೋಗಿಗಳ ಆರೋಗ್ಯ ಹಾಗೂ ಜೀವದ ಸುರಕ್ಷತೆಗೆ ಆದ್ಯತೆ ನೀಡಬೇಕು. ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ನೆರವು ನೀಡುವ ಮೂಲಕ ಸಮಾಜದ ಆರೋಗ್ಯ ಕಾಪಾಡುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.ತಾಲೂಕು ವೈದ್ಯಾಧಿಕಾರಿ ಆನಂದ ಗೋಟೂರು ಮಾತನಾಡಿ, ರೋಗಿಗೆ ವೈದ್ಯರು ನೀಡುವ ಚಿಕಿತ್ಸೆ ಎಷ್ಟು ಮುಖ್ಯವೋ, ಅಷ್ಟೇ ಮಹತ್ವ ಔಷಧಿ ನೀಡುವ ಫಾರ್ಮಸಿಸ್ಟ್‌ಗಳಿಗೂ ಇದೆ. ವೈದ್ಯರ ಸಲಹೆ ಹಾಗೂ ಚೀಟಿ ಇಲ್ಲದೆ ಔಷಧಿಗಳನ್ನು ನೀಡಬಾರದು. ಔಷಧಿಯ ಪ್ರಮಾಣದಲ್ಲಿ ಆಗುವ ಸಣ್ಣ ತಪ್ಪು ಕೂಡ ರೋಗಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದ್ದರಿಂದ ವೈದ್ಯರ ಸಲಹೆಯಂತೆ ಸರಿಯಾದ ಪ್ರಮಾಣದಲ್ಲಿ ಔಷಧಿ ನೀಡುವ ಜವಾಬ್ದಾರಿಯನ್ನು ಫಾರ್ಮಸಿಸ್ಟ್‌ಗಳು ಅರಿತುಕೊಳ್ಳಬೇಕು ಎಂದರು.
ಕೊಪ್ಪಳ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ರಾಠೋಡ ಮಾತನಾಡಿ, ಫಾರ್ಮಸಿಸ್ಟ್‌ಗಳು ಹಣದ ವ್ಯಾಮೋಹಕ್ಕೆ ಒಳಗಾಗಿ ಅನಗತ್ಯವಾಗಿ ಔಷಧಿಗಳನ್ನು ನೀಡಬಾರದು. ಔಷಧಿ ಖರೀದಿಸುವಾಗ ಕಡ್ಡಾಯವಾಗಿ ಬಿಲ್‌ಗಳನ್ನು ಪರಿಶೀಲಿಸಬೇಕು. ಔಷಧಿಗಳ ಸಂಗ್ರಹಣೆ, ಅವುಗಳ ಗುಣಮಟ್ಟ, ಅವಧಿ ಹಾಗೂ ನಿಯಮಾನುಸಾರ ಮಾರಾಟದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.ಪ್ರಾಚಾರ್ಯ ಭೀಮಪ್ಪ ಗೊಲ್ಲರ ಮಾತನಾಡಿ, ಗ್ರಾಮೀಣ ಜನರಿಗೆ ಸರಿಯಾದ ಔಷಧಿ ಹಾಗೂ ಆರೋಗ್ಯ ಮಾಹಿತಿ ತಲುಪಿಸುವಲ್ಲಿ ಫಾರ್ಮಸಿಸ್ಟ್‌ಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಫಾರ್ಮಸಿಸ್ಟ್‌ಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಎಎಸ್‌ಐ ಶಿವಕುಮಾರ ಹಿರೇಮಠ, ವಿಶ್ವನಾಥ ನಾಗೂರ, ಪ್ರಕಾಶ ಕರಡಿ, ಪ್ರಕಾಶ ಅಗಸಿಮುಂದಿನ, ಹನುಮಂತ ಗ್ವಾತಗಿ, ರಾಘವೇಂದ್ರ ಬಸ್ವಾ ಇದ್ದರು.