ಸಾರಾಂಶ
ಕನ್ನಡಪ್ರಭ ವಾರ್ತೆ ಜೇವರ್ಗಿ
ಪ್ರತಿಯೊಬ್ಬ ಮನುಷ್ಯನು ಪರೋಪಕಾರಿಯಾಗಿ ಜೀವನ ನಡೆಸಬೇಕು. ಧರ್ಮದ ಸಾರವು ಅದೇಯಾಗಿದೆ. ಧರ್ಮದ ತಿರುಳು ಅರಿತಾಗ ಜನ್ಮ ಸಾರ್ಥಕ ವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.ಪೇಠ-ಫಿರೋಜಾಬಾದನಲ್ಲಿ ನಡೆದ ಸಿದ್ಧಕುಲ ಚಕ್ರವರ್ತಿ ಸದ್ಗುರು ವಿಶ್ವಾರಾಧ್ಯರ 24ನೇ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಸಂಕ್ರಾತಿ ಪುಣ್ಯ ಪರ್ವಕಾಲದಲ್ಲಿ ಸೂರ್ಯ ಇಂದಿನಿಂದ ಉತ್ತರಾಯಣ ಕಡೆ ಚಲಿಸುತ್ತಾನೆ. ಪರ್ವಕಾಲದಲ್ಲಿ ನದಿಗಳ ಸಂಗಮದಲ್ಲಿ ಮಂಗಲ ಸ್ನಾನ ಮಾಡುವ ಮೂಲಕ ಧನ್ಯತೆ ಪಡೆದುಕೊಳ್ಳಬೇಕು. ಋಷಿ ಮುನಿಗಳು ತೀರ್ಥ ಕ್ಷೇತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಇಂಥಹ ಕ್ಷೇತ್ರಗಳಲ್ಲಿ ಪರ್ವ ಕಾಲದಲ್ಲಿ ಸ್ನಾನ ಮಾಡಿದರೇ ಪುಣ್ಯ ಪ್ರಾಪ್ತಿಯಾಗುತ್ತದೆ. ನದಿಗಳಲ್ಲಿ ಸ್ನಾನ ಮಾಡಿದ ನಂತರ ಕೊಬ್ಬರಿ, ಎಳ್ಳು, ಬೆಲ್ಲಾ ದಾನ ಮಾಡುವ ಮೂಲಕ ಸ್ನೇಹದಿಂದ ಕೂಡಿ ಬಾಳೋಣ ಎಂದು ಹರಸಬೇಕು. ಭೀಮಾಶಂಕರದಲ್ಲಿ ಹುಟ್ಟಿದ ಭೀಮಾ ನದಿ ಪಂಡರಪುರಕ್ಕೆ ಬಂದಾಗ ಚಂದ್ರಭಾಗಾ ನದಿ ಎಂದು ಕರೆಯುತ್ತಾರೆ. ಈ ವೇದಿಕೆಯಲ್ಲಿ ಅನೇಕ ಶಿವಾಚಾರ್ಯರು ಧರ್ಮಸಂದೇಶ ನೀಡುವ ಮೂಲಕ ಸಮಾಜವನ್ನು ಧರ್ಮಾಚರಣೆಯಿಂದ ಕೂಡುವಂತೆ ಮಾಡುತ್ತಾರೆ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಸ್ವಾಮಿಜಿ ಹೇಳಿದರು.
ಶಖಾಪುರದ ಸದ್ಗುರು ವಿಶ್ವಾರಾಧ್ಯ ತಪೋವನಮಠದ ಪೀಠಾಧಿಪತಿ ಡಾ.ಸಿದ್ದರಾಮ ಶಿವಾಚಾರ್ಯರು ಮಾತನಾಡಿ, ಕಾಶಿ ಜಗದ್ಗುರುಗಳು ಸಿದ್ದಾಂತ ಶಿಖಾಮಣಿ ಗ್ರಂಥ ರಚಿಸಿ 18ಭಾಷೆಗಳಲ್ಲಿ ಮುದ್ರಣ ಮಾಡಿಸಿದ್ದಾರೆ. ಪ್ರತಿಯೊಬ್ಬರಿಗೂ ಲಿಂಗಾಷ್ಟಕದ ಪ್ರತಿ ನೀಡಿದ್ದಾರೆ. ಕಾಶಿ ಜಗದ್ಗುರುಗಳ ಸಾಧನೆಯನ್ನು ಭಕ್ತಾದಿಗಳು ಶ್ಲಾಘಿಸಿದ್ದಾರೆ ಎಂದು ಶಖಾಪುರ ಸ್ವಾಮೀಜಿ ಹೇಳಿದರು.ತಾಂಬಾಳದ ಶ್ರೀ ವಿಜಯಕುಮಾರ ಸ್ವಾಮೀಜಿ, ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ವೆಂಕಟಬೇನೂರಿನ ಶ್ರೀ ಸಿದ್ಧರೇಣುಕ ಶಿವಾಚಾರ್ಯರು, ಫೀರೋಜಾಬಾದನ ಏಕದಂಡಗಿ ಮಠದ ಶ್ರೀ ಸುರೇಂದ್ರ ಸ್ವಾಮೀಜಿ, ಬೆಳಗುಂಪಾದ ಶ್ರೀ ಅಭಿನವ ಪರುತೇಶ್ವರ ಸ್ವಾಮೀಜಿ, ಕುಳೇಕುಮಟಗಿಯ ಶ್ರೀ ಗುರುಸ್ವಾಮಿ ಶರಣರು, ದರ್ಗಾದ ಸಜ್ಜಾದ ನಶೀನ್ ಹಬೀಬು ರಹೇಮಾನ್ ಜಹಾಗೀರದಾರ, ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ, ರಾಜಶೇಖರ ಸೀರಿ, ಸುರೇಶ ತಿಪ್ಪಶೆಟ್ಟಿ, ನಾಗಣ್ಣ ಪಾಟೀಲ ಸಿಂದಗಿ, ಗ್ರಾಪಂ ಅಧ್ಯಕ್ಷ ರಾಜಶೇಖರ ಹಾಲು, ಅಬ್ದುಲ್ ಲತೀಫ್ ಜಾಹಾಗೀರದಾರ, ಬಸವಣಪ್ಪ ಎಸ್ ಶಿರೂರ, ಚಂದ್ರಶೇಖರ ಮಹಾಮನಿ, ಶರಣಪ್ಪ ಬೇನಗಿಡ, ಕಲ್ಲಪ್ಪ ಪ್ಯಾಟಿ, ಸಿದ್ದಪ್ಪ ಸಾಹುಕಾರ, ಅರುಣಕುಮಾರ ಶಿರೂರ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಡಾ.ಮಹಾಂತೇಶ ಸೊನ್ನ ನಿರೂಪಿಸಿದರು.
ಜಾತ್ರಾ ಉತ್ಸವದ ನಿಮಿತ್ತ ಬೆಳಗ್ಗೆ ಸದ್ಗುರು ಶ್ರೀ ವಿಶ್ವಾರಾಧ್ಯರ ಗದ್ದುಗೆಗೆ ರುದ್ರಾಭಿಷೇಕ, ಅಲಂಕಾರ ಸೇರಿ ವಿಶೇಷ ಪೂಜೆ ನೆರವೇರಿತು. ಬೆಳಗ್ಗೆ 11ಕ್ಕೆ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರನ್ನು ಫಿರೋಜಾಬಾದ ಗ್ರಾಮದಿಂದ ವಿಶ್ವಾರಾಧ್ಯರ ಗದ್ದುಗೆವರೆಗೆ ಕುಂಬ ಕಳಸಗಳೊಂದಿಗೆ ಸಹಸ್ರಾರು ಭಕ್ತ ಸಮೂಹದ ಮಧ್ಯೆ ಸಾರೋಟಿನಲ್ಲಿ ಜಗದ್ಗುರುಗಳ ಭವ್ಯ ಮೆರವಣಿಗೆ ನಡೆಯಿತು. ಸಂಜೆ ಭವ್ಯ ರಥೋತ್ಸವ ಜರುಗಿತು. ಬಂದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.