ಬೀರೂರುಸಂಘ ಜೀವಿಯಾಗಿರುವ ಮನುಷ್ಯನ ಬದುಕು ಪರೋಪಕಾರದ ಮೂಲಕವೇ ಸಾರ್ಥಕತೆ ಪಡೆದುಕೊಳ್ಳಬೇಕಿದ್ದು, ಹಿರಿಯ ಪತ್ರಕರ್ತ ಕೆ.ಎಸ್.ಸೋಮಶೇಖರ್ ನುಡಿದಂತೆ ಬದುಕಿದವರು ಎಂದು ಚಿಂತಕ ವೈಎಸ್ ವಿ ದತ್ತ ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ಕೆ.ಎಸ್.ಸೋಮಶೇಖರ್ ಶ್ರದ್ಧಾಂಜಲಿ ಸಭೆ
ಕನ್ನಡಪ್ರಭ ವಾರ್ತೆ, ಬೀರೂರುಸಂಘ ಜೀವಿಯಾಗಿರುವ ಮನುಷ್ಯನ ಬದುಕು ಪರೋಪಕಾರದ ಮೂಲಕವೇ ಸಾರ್ಥಕತೆ ಪಡೆದುಕೊಳ್ಳಬೇಕಿದ್ದು, ಹಿರಿಯ ಪತ್ರಕರ್ತ ಕೆ.ಎಸ್.ಸೋಮಶೇಖರ್ ನುಡಿದಂತೆ ಬದುಕಿದವರು ಎಂದು ಚಿಂತಕ ವೈಎಸ್ ವಿ ದತ್ತ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಾಲಯದ ಆವರಣದಲ್ಲಿ ಹಿರಿಯ ಪತ್ರಕರ್ತ ಕೆ.ಎಸ್.ಸೋಮಶೇಖರ್ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪತ್ರಕರ್ತನಿಗೆ ಸಮಾಜಮುಖಿ ಚಿಂತನೆಯೇ ಜೀವಾಳ, ತಮ್ಮ ಸಂಪರ್ಕವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೆ ಇನ್ನೊಬ್ಬರಿಗೆ ಕಿಂಚಿತ್ತಾದರೂ ನೆರವಾಗಬೇಕು ಎನ್ನುವ, ಎಲ್ಲಾ ಜಾತಿ ಮತ್ತು ಧರ್ಮಕ್ಕೂ ಮೀರಿ ಸಾಮಾಜಿಕ ಚಟುವಟಿಕೆಗಳಲ್ಲಿ ಕಳಕಳಿಯಿಂದ ಕ್ರಿಯಾಶೀಲ ಬದುಕು ರೂಪಿಸಿಕೊಂಡ ಬೀರೂರು ಸೋಮಣ್ಣ ಎಂದು ಬಣ್ಣಿಸಿದರು.
ಶ್ರೀಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಸ್ಥಾನದ ಕಾರ್ಯದರ್ಶಿಯಾಗಿದ್ದ ಅವರಿಗೆ ‘ಶ್ರೀರಾಮ ಕುಟೀರ’ ಎಂಬ ಸಮು ದಾಯ ಭವನ ನಿರ್ಮಿಸುವ ಕನಸಿತ್ತು. ಅವರ ಆಶಯದಂತೆ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರ ಮನವೊಲಿಸಿ ನನ್ನಿಂದಾದ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.ಮಾಲು ಸ್ಲೀಪರ್ಸ್ ವ್ಯವಸ್ಥಾಪಕ ವೆಂಕಟೇಶ ಜಿ. ಒಡೆಯರ್, ‘ಸೋಮಣ್ಣ ಸಮಾಜ ಮುಖಿ ಚಟುವಟಿಕೆಗಳಿಗೆ ಜೇಸಿಐ, ಕಸಾಪ, ವಿಪ್ರ ಸೌಹಾರ್ದ ಸಹಕಾರ ಬ್ಯಾಂಕ್, ಶ್ರೀರಾಮ ಸೇವಾ ಸಂಘ, ವಿವಿಧ ಶಾಲೆ–ಕಾಲೇಜುಗಳ ಹಿರಿಯ ವಿದ್ಯಾರ್ಥಿಗಳ ಸಂಘದಂತೆ ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಳ್ಳುವ ಜತೆಗೆ ಅಭಿವೃದ್ಧಿ ಪರ ಚಿಂತನೆಗಳಿಗೆ ಸದಾ ತುಡಿಯುತ್ತಿದ್ದರು’ ಎಂದರು. ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ. ವಿಶ್ವನಾಥ್ ಗೌಡ , ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ , ಪುರಸಭೆ ಮಾಜಿ ಸದಸ್ಯ ಬಿ.ಆರ್. ಮೋಹನ್ ಕುಮಾರ್, ಶಿಕ್ಷಕ ಸಂಪತ್ ಕುಮಾರ್, ಪತ್ರಕರ್ತರಾದ ವಿಜಯಕುಮಾರ್, ಚೇತನ್ ಬೇಲೇನಹಳ್ಳಿ, ವೈ.ಕೆ. ಸೂರ್ಯನಾರಾಯಣ, ಓಂಕಾರಮೂರ್ತಿ, ನಾಗರಿಕರ ಪರವಾಗಿ ಬಳೆಗಾರ ಬಿ.ವಿ. ಮಹೇಶ್ವರಪ್ಪ ಮತ್ತು ಸೋಮಶೇಖರ್ ಕುಟುಂಬ ಸದಸ್ಯರು ಒಡನಾಟದ ಅನುಭವ ಹಂಚಿಕೊಂಡರು. ಪಿಎಂಶ್ರೀ ಶಾಲೆ ಮುಖ್ಯಶಿಕ್ಷಕರು, ಸಹಶಿಕ್ಷಕರು, ಸೀತಾರಾಮ ಮಹಿಳಾ ಮಂಡಳಿ, ಶ್ರೀರಾಮಸೇವಾ ಸಂಘದ ಸದಸ್ಯರು, ಹಿರಿಯ ಪತ್ರಕರ್ತ ಮುರುಗೇಶಪ್ಪ, ದೇವರಮನೆ ಗಿರೀಶ್, ಡಾ.ಎ.ಎಸ್. ಸಜ್ಜನರ್, ಡಾ. ಅನಂತಪದ್ಮನಾಭ ಭಾಗವಹಿಸಿದ್ದರು.1 ಬೀರೂರು 1ಬೀರೂರು ಪಟ್ಟಣದ ಶ್ರೀಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ಕೆ.ಎಸ್. ಸೋಮಶೇಖರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಶಾಸಕ ವೈಎಸ್ವಿ. ದತ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು