ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಚಲನಚಿತ್ರ ನಿರ್ದೇಶಕರ ತಾತ್ವಿಕ ದೃಷ್ಟಿಕೋನವು ಎಲ್ಲ ತಾಂತ್ರಿಕ ಅಂಶಗಳಿಗಿಂತ ಹೆಚ್ಚು ಮಹತ್ವದ್ದು ಮತ್ತು ಈ ದೃಷ್ಟಿಕೋನವೇ ತಾಂತ್ರಿಕ ಅಂಶಗಳು ಬಳಸಲ್ಪಡುವ ರೀತಿಯನ್ನು ನಿರ್ಧರಿಸುತ್ತದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಪಿ.ಎನ್. ರಾಮಚಂದ್ರ ಹೇಳಿದರು.ಅವರು ಮಾಹೆಯ ಅಂಗಸಂಸ್ಥೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಮತ್ತು ಉಡುಪಿ ಚಿತ್ರ ಸಮಾಜ ಆಶ್ರಯದಲ್ಲಿ ಚಲನಚಿತ್ರ ನಿರ್ಮಾಣದ ಕರಕುಶಲತೆಯ ಕುರಿತು ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದ ಮಾತನಾಡಿದರು.ಚಿತ್ರ ರಚನೆಯ ವಿವಿಧ ಅಂಶಗಳು, ಚಿತ್ರಕಥೆ, ಛಾಯಾಗ್ರಹಣ, ಸಂಕಲನ, ಪಾತ್ರಗಳು ಮತ್ತು ನಟನೆ, ಧ್ವನಿ, ರಂಗಸಜ್ಜಿಕೆ ಇತ್ಯಾದಿಗಳ ಬಳಕೆ, ಮಹತ್ವದ ಬಗ್ಗೆ ವಿವರಿಸಿದರು. ಈ ಎಲ್ಲ ತಾಂತ್ರಿಕ ಅಂಶಗಳು ಮುಖ್ಯವಾದದ್ದು, ಆದರೆ ಚಲನಚಿತ್ರ ನಿರ್ದೇಶಕರ ತಾತ್ವಿಕ ದೃಷ್ಟಿಕೋನವೇ ಹೆಚ್ಚು ಮುಖ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡರು.ತಾತ್ವಿಕ ದೃಷ್ಟಿಕೋನವನ್ನು ಚಲನಚಿತ್ರದಲ್ಲಿ ತರಲು ಎಲ್ಲ ತಾಂತ್ರಿಕತೆಗಳನ್ನು ಸಜ್ಜುಗೊಳಿಸಬೇಕಾಗುತ್ತದೆ. ಚಲನಚಿತ್ರ ನಿರ್ದೇಶಕರ ತಾತ್ವಿಕ ನೆಲೆಯು ಚಲನಚಿತ್ರ ನಿರ್ಮಾಣದ ಕರಕುಶಲ ಸ್ವರೂಪವನ್ನು ನಿರ್ಧರಿಸುತ್ತದೆ ಎಂದು ಹೇಳಿದರು.ನಂತರ ಅವರು ನಿರ್ದೇಶಿಸಿದ ಇತ್ತೀಚಿನ ಚಲನಚಿತ್ರ ‘ಹಿಯರ್ ಓ, ಮಹಾತ್ಮ’ ಇದು ದೇಶದ ಆಗುಹೋಗುಗಳ ವ್ಯಾಖ್ಯಾನವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.ಸಾಹಿತ್ಯ ವಿಮರ್ಶಕ ಪ್ರೊ.ಮುರಳೀಧರ ಉಪಾದ್ಯ ಹಿರಿಯಡ್ಕ, ಪ್ರೊ.ಫಣಿರಾಜ್, ಪ್ರೊ.ವರದೇಶ್ ಹಿರೇಗಂಗೆ, ಡಾ.ಶ್ರೀಕುಮಾರ್, ನಾಗೇಶ್ ಉದ್ಯಾವರ, ಸಂತೋಷ್ ನಾಯಕ್ ಪಟ್ಲ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದ್ದರು.