ಅಂತರಂಗ ಶುದ್ಧಿಗೆ ತಾತ್ವಿಕ ಚಿಂತನೆ ಮುಖ್ಯ

| Published : Mar 25 2024, 12:47 AM IST

ಸಾರಾಂಶ

ಅಂತರಂಗ ಶುದ್ಧಿಗಾಗಿ ತಾತ್ವಿಕ ಚಿಂತನೆ ಅತಿ ಮುಖ್ಯ. ಪಾರಮಾರ್ಥಿಕ, ಅಲೌಕಿಕ ಗುರಿ ಮುಟ್ಟುವಂತಾಗಬೇಕು. ಆದರೆ, ಸಾಮಾಜಿಕ ಜಾಲತಾಣ ಮಾಧ್ಯಮಗಳಿಂದ ಕಣ್ಣಿಗೆ ಕಂಡಿದ್ದೇ ಸತ್ಯ ಎನ್ನುವಂತಾಗಿದೆ. ಪುಸ್ತಕಕ್ಕೂ ಮಸ್ತಕಕ್ಕೂ ಸಂಪರ್ಕವೇ ಇಲ್ಲವಾಗುತ್ತಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ದಾವಣಗೆರೆಯಲ್ಲಿ ವಿಷಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ಅಂತರಂಗ ಶುದ್ಧಿಗಾಗಿ ತಾತ್ವಿಕ ಚಿಂತನೆ ಅತಿ ಮುಖ್ಯ. ಪಾರಮಾರ್ಥಿಕ, ಅಲೌಕಿಕ ಗುರಿ ಮುಟ್ಟುವಂತಾಗಬೇಕು. ಆದರೆ, ಸಾಮಾಜಿಕ ಜಾಲತಾಣ ಮಾಧ್ಯಮಗಳಿಂದ ಕಣ್ಣಿಗೆ ಕಂಡಿದ್ದೇ ಸತ್ಯ ಎನ್ನುವಂತಾಗಿದೆ. ಪುಸ್ತಕಕ್ಕೂ ಮಸ್ತಕಕ್ಕೂ ಸಂಪರ್ಕವೇ ಇಲ್ಲವಾಗುತ್ತಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ತು, ವಿಶ್ವ ಕಲ್ಯಾಣ, ಪರಿಸರ, ಗ್ರಾಹಕ, ಸಾಂಸ್ಕೃತಿಕ ಪರಿಷತ್ತು ಸಹಯೋಗದಲ್ಲಿ ನಡೆದ "ಅಮೃತ ಗೋಸಲ ನಿರಂಜನ ವಂಶ ಪರಂಪರೆ " ಕೃತಿ ಲೋಕಾರ್ಪಣೆ, ಹಿರಿಯ ವ್ಯಂಗ್ಯ ಚಿತ್ರಕಾರ ಡಾ. ಎಚ್.ಬಿ. ಮಂಜುನಾಥ್ ಅವರಿಗೆ ಅಭಿನಂದನೆ, ಮಹಿಳಾ ದಿನಾಚರಣೆ, ಕಾಯಕ ಯೋಗಿ ಬಸವಶ್ರೀ, ಅಕ್ಕಮಹಾದೇವಿ ಪ್ರಶಸ್ತಿ ಹಾಗೂ ಸ್ವರಚಿತ ವಚನಗಳ ವಚನಕಾರರಿಗೆ ಸನ್ಮಾನಗಳ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಮಸ್ತಕದಲ್ಲಿನ ಚಿಂತನೆ, ಸಾಹಿತ್ಯದ ಬೆಳಕು ಪುಸ್ತಕದ ಮೂಲಕ ಸಮಾಜಕ್ಕೆ ನೀಡಬೇಕು. ಮೊಬೈಲ್, ಕಂಪ್ಯೂಟರ್ ಟಿವಿ ಇಲ್ಲದ ಕಾಲದಲ್ಲಿ ಚಿಂತನೆಯ ಪುಸ್ತಕಗಳು ಇರುತ್ತಿದ್ದವು. ಪುಸ್ತಕಗಳಿದ್ದ ಮನೆ ವಾತಾವರಣ ವಿದ್ವತ್ ಪೂರ್ಣ ಕಳೆಕಂಡು ಬರುತ್ತಿತ್ತು. ಈಗ ಓದುವುದು ಎರಡನೇ ಮಾತಾಗಿದೆ. ಗೂಗಲ್ ಮೊರೆಯಿಂದ ಸಾಹಿತ್ಯದ ಪರಿಚಯ ಇಲ್ಲವಾಗಿದೆ ಎಂದು ತಿಳಿಸಿದರು.

ದಾವಣಗೆರೆ ವಿವಿ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಡಾ. ಎಚ್.ಬಿ. ಮಂಜುನಾಥ್ ಭೌತಿಕ ರಗಳೆ ದೂರಮಾಡಿ ತಾಯಿ ಸೇವೆಗಾಗಿ ಜೀವನ ಮುಡಿಪಾಗಿಟ್ಟವರು. ಜನ ಸಾಮಾನ್ಯವಾಗಿ ಮಾನ್ಯವಾಗಿ ಇರಬೇಕು ಎಂದು ಸರಳ ಜೀವನ, ಸಮಾಜಮುಖಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಎಂದೋ ಗೌರವ ಡಾಕ್ಟರೇಟ್ ದೊರೆಯಬೇಕಿತ್ತು. ಎಚ್.ಬಿ. ಮಂಜುನಾಥ್ ಸೇವೆ ಯುವಜನಾಂಗಕ್ಕೆ ಮಾದರಿ ಎಂದು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿದ ಡಾ. ಎಚ್.ಬಿ. ಮಂಜುನಾಥ್ ಮಾತನಾಡಿ, ಇಡೀ ಪ್ರಪಂಚದಲ್ಲಿ ನಾಗರಿಕತೆ ಕಂಡರೆ, ಭಾರತದಲ್ಲಿ ಸಂಸ್ಕೃತಿ ಕಂಡುಬರುತ್ತಿದೆ. ಧರ್ಮಾಧಾರಿತ ಎಂದರೆ ನನ್ನ ಆತ್ಮಕ್ಕೆ ವಂಚನೆಯಾಗದೇ, ಇನ್ನೊಬ್ಬರಿಗೆ ಅನುಕೂಲವಾಗಿ ನಡೆಯುವುದು ಎಂದರ್ಥ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಕ್ಕಮಹಾದೇವಿ ಪ್ರಶಸ್ತಿಗಳನ್ನು ಜಿ.ಕೆ.ಶಂಕುಂತಲಾ, ಎ.ಬಿ.ರುದ್ರಮ್ಮ ಅವರಿಗೆ ಪ್ರದಾನ ಮಾಡಲಾಯಿತು.

ಪರಿಷತ್ತು ಅಧ್ಯಕ್ಷ ಡಾ. ರೇವಣ್ಣ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್, ಇಂದೂಧರ ನಿಶಾನಿಮಠ್, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು, ಶ್ರೀಕಂಠಮೂರ್ತಿ, ಶಿವಕುಮಾರ ಡಿ. ಶೆಟ್ಟರ್ ಇತರರು ಇದ್ದರು.

- - -

-24ಕೆಡಿವಿಜಿ38ಃ:

"ಅಮೃತ ಗೋಸಲ ನಿರಂಜನ ವಂಶ ಪರಂಪರೆ " ಕೃತಿಯನ್ನು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು.