ಬದಲಾಗುತ್ತಿರುವ ಕಾನೂನು ಕಾಯಿದೆಗಳನ್ನು ಗಮನದಲ್ಲಿರಿಸಿಕೊಂಡು ಪ್ರತೀಯೋರ್ವ ಔಷಧಿ ವ್ಯಾಪಾರಿಯೂ ಪಾರದರ್ಶಕವಾಗಿ ವ್ಯವಹರಿಸಿ ಗ್ರಾಹಕರಿಗೆ ಸೇವಾ ಮನೋಭಾವದಿಂದ ಔಷಧಿಗಳನ್ನು ನೀಡಬೇಕು ಎಂದು ಕೊಡಗು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯ ಅಂಕಿತ ಅಧಿಕಾರಿ ಡಾ. ಅನಿಲ್ ಧಾವನ್ ಕರೆ ನೀಡಿದ್ದಾರೆ.
ಮಡಿಕೇರಿ: ಬದಲಾಗುತ್ತಿರುವ ಕಾನೂನು ಕಾಯಿದೆಗಳನ್ನು ಗಮನದಲ್ಲಿರಿಸಿಕೊಂಡು ಪ್ರತೀಯೋರ್ವ ಔಷಧಿ ವ್ಯಾಪಾರಿಯೂ ಪಾರದರ್ಶಕವಾಗಿ ವ್ಯವಹರಿಸಿ ಗ್ರಾಹಕರಿಗೆ ಸೇವಾ ಮನೋಭಾವದಿಂದ ಔಷಧಿಗಳನ್ನು ನೀಡಬೇಕು ಎಂದು ಕೊಡಗು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯ ಅಂಕಿತ ಅಧಿಕಾರಿ ಡಾ. ಅನಿಲ್ ಧಾವನ್ ಕರೆ ನೀಡಿದ್ದಾರೆ. ನಗರದ ಫಾರ್ಮಾ ಭವನದಲ್ಲಿ ಕೊಡಗು ಔಷಧಿ ವ್ಯಾಪಾರಸ್ಥರ ಸಂಘದಿಂದ ಆಯೋಜಿತವಾಗಿದ್ದ ವಿಶ್ವ ಔಷಧಿ ತಜ್ಞರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರತೀಯೋರ್ವ ವ್ಯಾಪಾರಸ್ಥರು ಆಹಾರ ಪರವಾನಗಿ ಪಡೆಯಲೇಬೇಕು. ಉತ್ತಮ ಗುಣಮಟ್ಟದ ಆಹಾರ ಮತ್ತು ಔಷಧಿಯನ್ನು ಗ್ರಾಹಕರಿಗೆ ನೀಡವುದು ವ್ಯಾಪಾರಸ್ಥರ ಆದ್ಯತೆಯಾಗಿದ್ದು ಈ ಸಂಬಂಧ ಯಾವುದೇ ದೂರು ಬಂದಲ್ಲಿ ಅಂಥ ವ್ಯಾಪಾರಿಗಳ ವಿರುದ್ದ ಕಠಿಣ ಕಾನೂನು ಕ್ರಮ ಖಂಡಿತಾ ಎಂದು ಅನಿಲ್ ಧಾವನ್ ಎಚ್ಚರಿಸಿದರು.ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ಲು ಜೀವನ್ ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಂಘಕ್ಕೆ ಸ್ವಂತ ಭವನ ನಿರ್ಮಾಣವಾಗಿದ್ದು, ಇಲ್ಲಿ ಮುಂದಿನ ದಿನಗಳಲ್ಲಿ ವಿನೂತನ ಕಾರ್ಯಕ್ರಮಗಳು, ಸಭೆಗಳನ್ನು ಆಯೋಜಿಸುತ್ತಾ ಸಮಾಜಮುಖಿಯಾಗಿ ಸಂಘವನ್ನು ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕ ಅಜಯ್ ರಾಜ್ ಷಾ ಮಾತನಾಡಿ, ಔಷಧಿ ಮಾರಾಟದ ಹಲವಾರು ಕಾನೂನುಗಳು ಕೂಡ ಬದಲಾಗುತ್ತಲೇ ಇವೆ. ಇಂಥ ಕಾನೂನು ನಿಯಮಗಳ ಬಗ್ಗೆ ಕಾಲಕಾಲಕ್ಕೆ ತಿಳಿಯುವುದು ಔಷಧಿ ವ್ಯಾಪಾರಸ್ಥರ ಕರ್ತವ್ಯ ಎಂದರಲ್ಲದೇ, ಕಾನೂನು ಪಾಲನೆ ಮಾಡುವ ಮೂಲಕ ಸರ್ಕಾರದ ಕಾನೂನುಗಳನ್ನು ಗೌರವಿಸಿ ಎಂದು ಸೂಚಿಸಿದರು.ಕೊಡಗು ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾದಿಕಾರಿ ಡಾ. ಕರುಂಬಯ್ಯ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಕೊರತೆಯಿದ್ದು, ರಕ್ತದಾನ ಶಿಬಿರಗಳ ಸಂಖ್ಯೆಯನ್ನು ಹೆಚ್ಚಿಸಿ ರಕ್ತವನ್ನು ಸಂಗ್ರಹಿಸುವ ಅನಿವಾರ್ಯತೆಯಿದೆ ಎಂದರು. ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಖಜಾಂಜಿ ಪ್ರಸಾದ್ ಗೌಡ ಅತಿಥಿ ಪರಿಚಯ ಮಾಡಿ, ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್ ನಿರೂಪಿಸಿದರು. ರಮ್ಯ ಪ್ರಸಾದ್ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಟಿ. ಪುರುಷೋತ್ತಮ್ ಇದ್ದರು.
ಔಷಧಿ ವ್ಯಾಪಾರಸ್ಥರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಶಿಬಿರದಲ್ಲಿ 23 ಯೂನಿಟ್ ರಕ್ತ ಸಂಗ್ರಹವಾಯಿತು. ಸಂಘದ ನಿರ್ದೇಶಕರಾದ ಎ.ಕೆ. ವಿನೋದ್, ಪ್ರಸಾದ್ , ಚಂದ್ರಶೇಖರ್, ಕಿರಣ್ ಕುಂದರ್, ಧನಂಜಯ್ ಶಾಸ್ತ್ರಿ, ಗೌತಮ್ ಪ್ರಸಾದ್, ವಿವೇಕ್ ಮತ್ತಿತರರು ಪಾಲ್ಗೊಂಡಿದ್ದರು.