ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ವಿಶ್ವ ಛಾಯಗ್ರಹಕರ ದಿನಾಚರಣೆಯ ಅಂಗವಾಗಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಗಸ್ಟ್ ೨೧ರ ಗುರುವಾರದಂದು ಬೆಳಿಗ್ಗೆ ೧೦:೩೦ಕ್ಕೆ ಎರಡನೇ ವರ್ಷದ ವಿಶ್ವ ಛಾಯಗ್ರಾಹಕರ ದಿನಾಚರಣೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಎಚ್. ವೇಣುಕುಮಾರ್ ತಿಳಿಸಿದರು.ಇದೇ ವೇಳೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಆಗಸ್ಟ್ ೨೧ರ ಗುರುವಾರದಂದು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದವತಿಯಿಂದ ಎರಡನೇ ವರ್ಷದ ವಿಶ್ವ ಛಾಯಗ್ರಾಹಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ನಮ್ಮ ಸಂಘದಿಂದ ಹಿರಿಯ ಛಾಯಗ್ರಾಹಕರಾದಂತಹ ಜ್ಞಾನೇಶ್, ಅಂಬಿಕಾ ಪ್ರಸಾದ್, ಪ್ರಕಾಶ್, ಅತೀಖುರ್ ರೆಹಮನ್, ನಟರಾಜು ಹಾಗೂ ಶ್ರೀನಿವಾಸ್ ಪಿ.ಎ. ಅವರನ್ನ ಸನ್ಮಾನಿಸಿ ಗೌರವಿಸಲಾಯಿತು. ಈ ವರ್ಷವೂ ಕೂಡ ಎರಡನೇ ಬಾರಿಗೆ ಪತ್ರಕರ್ತರ ಸಂಘದ ವತಿಯಿಂದ ವಿಶ್ವ ಛಾಯಗ್ರಾಹಕರ ದಿನಾಚರಣೆಯನ್ನು ಗುರುವಾರ ಬೆಳಿಗ್ಗೆ ೧೦:೩೦ಕ್ಕೆ ಏರ್ಪಡಿಸಲಾಗಿದೆ.
ಪತ್ರಕರ್ತರ ಸಂಘದಿಂದ ದೃಶ್ಯ ಮತ್ತು ಮುದ್ರಣ ಮಾಧ್ಯಮದವರು ಸೇವೆ ಸಲ್ಲಿಸುತ್ತಿರುವ ಛಾಯಗ್ರಾಹಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಆಯ್ಕೆ ಆಗಿರುವ ನಮ್ಮ ಮಾರ್ಗದರ್ಶಕರು ಎಚ್.ಬಿ. ಮದನ್ ಗೌಡರನ್ನು ಸಹ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲಾ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಂಪಾದಕರು, ವರದಿಗಾರರು, ದೃಶ್ಯ ಮಾಧ್ಯಮದವರು, ಛಾಯಗ್ರಾಹಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ಪತ್ರಕರ್ತರಿಗೆ ಅಪಘಾತ ವಿಮೆ, ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳಲ್ಲದೆ, ಹಲವು ವಿಶಿಷ್ಟ ಕಾರ್ಯಕ್ರಮಗಳ ಕ್ರಿಯಾಶೀಲವಾಗಿ ಆಯೋಜನೆ ಮಾಡುತ್ತಿದೆ. ಮೊದಲ ಬಾರಿಗೆ ಕಳೆದ ವರ್ಷ ವಿಶ್ವಛಾಯಾಗ್ರಾಹಕರ ದಿನಾಚರಣೆಗೂ ಚಾಲನೆ ನೀಡಲಾಗಿತ್ತು ಎಂದು ಇದೇ ವೇಳೆ ಸಮಾಜಮುಖಿ ಕಾರ್ಯಕ್ರಮಗಳನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.