ಛಾಯಾಗ್ರಾಹಕರು ಹೊಸತನಕ್ಕೆ ಒಗ್ಗಿಕೊಳ್ಳುವುದು ಅಗತ್ಯ

| Published : Aug 25 2025, 01:00 AM IST

ಛಾಯಾಗ್ರಾಹಕರು ಹೊಸತನಕ್ಕೆ ಒಗ್ಗಿಕೊಳ್ಳುವುದು ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಫೋಟೋಗ್ರಾಫಿ ಉದ್ಯಮ ಇಂದು ಸಾಕಷ್ಟು ಅಭಿವೃದ್ಧಿಯಾಗಿದೆ. ಕಾಲಕ್ಕೆ ತಕ್ಕಂತೆ ಗ್ರಾಹಕರ ಅಭಿರುಚಿಗಳನ್ನು ಅರಿತು ವೃತ್ತಿ ಜೀವನ ನಡೆಸಬೇಕು

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಛಾಯಾಗ್ರಾಹಕರು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ವೃತ್ತಿ ಜೀವನ ನಡೆಸಬೇಕಿದೆ. ಇದರೊಂದಿಗೆ ಹೊಸತನಕ್ಕೆ ಒಗ್ಗಿಕೊಳ್ಳುವ ಅಗತ್ಯವಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಜೋಗೂರ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ತಾಲೂಕು ವೃತ್ತಿನಿರತ ಛಾಯಾಗ್ರಹಕರ ಸಂಘ ಆಯೋಜಿಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಕಾರ್ಮಿಕರ ಕಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಫೋಟೋಗ್ರಾಫಿ ಉದ್ಯಮ ಇಂದು ಸಾಕಷ್ಟು ಅಭಿವೃದ್ಧಿಯಾಗಿದೆ. ಕಾಲಕ್ಕೆ ತಕ್ಕಂತೆ ಗ್ರಾಹಕರ ಅಭಿರುಚಿಗಳನ್ನು ಅರಿತು ವೃತ್ತಿ ಜೀವನ ನಡೆಸಬೇಕು ಎಂದರು.

ಕಾರ್ಮಿಕ ಇಲಾಖೆಯಿಂದ 95 ವರ್ಗಕ್ಕೆ ಸೇರಿದ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಿಸಲಾಗುತ್ತಿದೆ. ಶೀಘ್ರವೇ ರಾಜ್ಯದ ಮೂಲೆ ಮೂಲೆಗೆ ಕಾರ್ಮಿಕ ಇಲಾಖೆಯಿಂದ ವಿವಿಧ ಯೋಜನೆಗಳನ್ನು ತಲುಪಿಸಲಾಗುವುದು. ಯಾವುದೇ ಸಂಘ-ಸಂಸ್ಥೆಗಳು ಕಾರ್ಮಿಕ ಇಲಾಖೆಗೆ ಒಳಪಟ್ಟಿದ್ದಲ್ಲಿ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡು ಸರ್ಕಾರದ ಸೌಲಭ್ಯ ಪಡೆಯಬೇಕು. ವೈದ್ಯಕೀಯ, ಆರ್ಥಿಕ ಮತ್ತು ಇತರೆ ಸೌಲಭ್ಯಗಳನ್ನು ಪಡೆದುಕೊಂಡು ಕಾರ್ಮಿಕರು ಸಾಮಾಜಿಕವಾಗಿ ಸದೃಢರಾಗಿ ಎಂದರು.

ಛಾಯಾಗ್ರಹಣ ತರಬೇತಿದಾರ ಅಮೃತ ಚರಂತಿಮಠ ಮಾತನಾಡಿ, ಇತ್ತೀಚೆಗೆ ಹೊಸ ಛಾಯಾಗ್ರಾಹಕರು ಯಾವುದೇ ತರಬೇತಿ ಇಲ್ಲದೆ ಕ್ಯಾಮೆರಾಗಳನ್ನು ಅಳವಡಿಸಿಕೊಂಡು ಫೋಟೋಗ್ರಾಫಿ ಮಾಡುತ್ತಿದ್ದಾರೆ. ಈಗಿನ ಎಐ ಆಧಾರಿತ ಹೊಸ ಹೊಸ ತಂತ್ರಜ್ಞಾನಗಳು ಅಳವಡಿಸಿಕೊಳ್ಳಬೇಕು. ಈ ಮೊದಲಿನ ನೆಗೆಟಿವ್ ಕ್ಯಾಮೆರಾಗಳಲ್ಲಿ ಕೇವಲ ಅಪರ್ಚರ್ ಸ್ಪೀಡ್, ಐಎಸ್‌ಒ ಫೋಕಸ್ ಮಾತ್ರ ಅಳವಡಿಸಲಾಗಿತ್ತು. ಆದರೆ, ಈಗ ಫುಲ್ ಪ್ರೇಮ್ ಕ್ಯಾಮೆರಾಗಳು ಮಾರ್ಕೆಟ್‌ಲ್ಲಿ ಹೆಜ್ಜೆ ಇಟ್ಟಿವೆ ಎಂದರು.

ವೃತ್ತಿನಿರತ ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಅಪ್ಪು ಹುಕ್ಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ 1996ರಲ್ಲಿ ಕೇವಲ 15 ಛಾಯಾಗ್ರಾಹಕರಿಂದ ಪ್ರಾರಂಭವಾದ ಸಂಘಟನೆ ಇದೀಗ 150ಕ್ಕಿಂತ ಹೆಚ್ಚು ಛಾಯಾಗ್ರಾಹಕರು ಸಕ್ರಿಯವಾಗಿ ತೊಡಗಿದ್ದಾರೆ. ಈ ಮೂಲಕ ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್.ಬಸವರಾಜ ರಾಮಣ್ಣವರ ಮಾತನಾಡಿದರು. ಕೆಪಿಎ ಸಂಸ್ಥೆ ಕೊಡಮಾಡಲಿರುವ ಪ್ರತಿಷ್ಠಿತ ಛಾಯಾಶ್ರೀ ಪ್ರಶಸ್ತಿ ವಿಜೇತ ಮಹಾನಿಂಗ ಮೇಲ್ಮಟ್ಟಿ ಹಾಗೂ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪ್ರಶಸ್ತಿ ವಿಜೇತ ರಾಘವೇಂದ್ರ ದೇವಗೋಜಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸಮಗ್ರ ಜಿಲ್ಲಾ ಛಾಯಾಗ್ರಾಹಕರ ಬೆಳಗಾವಿ ಅಧ್ಯಕ್ಷ ಲಕ್ಷ್ಮಣ ಯಮಕನಮರಡಿ, ಹುಕ್ಕೇರಿ ಕಾರ್ಮಿಕ ಇಲಾಖೆ ನಿರೀಕ್ಷಕ ಮಹಾಂತೇಶ ಹಿರೇಮಠ, ಹಿರಿಯ ಛಾಯಾಗ್ರಾಹಕ ಸುರೇಶ ರಜಪೂತ, ಸಂಘದ ತಾಲೂಕು ಉಪಾಧ್ಯಕ್ಷ ಶಿವಾನಂದ ಪಾಟೀಲ, ಕಾರ್ಯದರ್ಶಿ ಬಸವರಾಜ ದಾರೋಜಿ, ಖಜಾಂಚಿ ಉಮೇಶ ಕರಗುಪ್ಪಿ, ಹುಕ್ಕೇರಿ, ಸಂಕೇಶ್ವರ ಮತ್ತು ಯಮಕನಮರಡಿ ವಿಭಾಗದ ಛಾಯಾಗ್ರಾಹಕ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ್ರಶಾಂತ ನಾಗನೂರಿ ವಂದಿಸಿದರು.