ವಿಧಾನಸೌಧದಲ್ಲಿ ಮೊರೇರ ಬೆಟ್ಟದ ಛಾಯಾಚಿತ್ರ ಪ್ರದರ್ಶನ

| Published : Aug 20 2025, 02:00 AM IST

ಸಾರಾಂಶ

ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯ್ಕೆ ಮಾಡಿರುವ 7 ಅದ್ಭುತಗಳಲ್ಲಿ ಒಂದಾದ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಮೊರೇರ ಬೆಟ್ಟದ ಶಿಲಾ ಸಮಾಧಿಗಳು ಮತ್ತು ಗುಹಾ ಚಿತ್ರಗಳ ಪ್ರದರ್ಶನ ಮಂಗಳವಾರ ವಿಧಾನಸೌಧದಲ್ಲಿ ಪ್ರದರ್ಶನಗೊಂಡಿತು.

ಗಂಗಾವತಿ:

ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯ್ಕೆ ಮಾಡಿರುವ 7 ಅದ್ಭುತಗಳಲ್ಲಿ ಒಂದಾದ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಮೊರೇರ ಬೆಟ್ಟದ ಶಿಲಾ ಸಮಾಧಿಗಳು ಮತ್ತು ಗುಹಾ ಚಿತ್ರಗಳ ಪ್ರದರ್ಶನ ಮಂಗಳವಾರ ವಿಧಾನಸೌಧದಲ್ಲಿ ಪ್ರದರ್ಶನಗೊಂಡಿತು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಸಂಗ್ರಾಲಯಗಳು ಮತ್ತು ಪರಂಪರೆ ಇಲಾಖೆ ಏರ್ಪಡಿಸಿದ್ದ ಚಿತ್ರ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಚಾಲನೆ ನೀಡಿದರು. ಈ ಹಿಂದೆ ಮೊರೇರ ಬೆಟ್ಟಕ್ಕೆ ಭೇಟಿ ನೀಡಿ ವೀಕ್ಷಿಸಿದ ಸಚಿವ ಎಚ್.ಕೆ. ಪಾಟೀಲ್, ಐತಿಹಾಸಿಕವಾಗಿರುವ ಈ ಸ್ಥಳವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಬೇಕೆಂಬ ಕಾರಣಕ್ಕೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದರು.

30 ಛಾಯಾಚಿತ್ರ:

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಿರೆಬೆಣಕಲ್‌ನ ಮೊರೇರ ಶಿಲಾ ಸಮಾಧಿ ಸೇರಿದಂತೆ ಗುಹಾ ಚಿತ್ರಗಳ 30ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಗಲ್ಲು ಗೋರಿ, ಕಲ್ಲಿನ ನಗಾರಿ, ಚಿಕ್ಕ ಹಳ್ಳ, ವಿವಿಧ ರೀತಿಯ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಹಟ್ಟಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಪುರಾತತ್ವ ಸಂಗ್ರಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜ್, ಡಿ.ಡಿ. ಕಾವ್ಯಶ್ರೀ, ಉಪನಿರ್ದೇಶಕ ಡಾ. ಶೇಜಸ್ವರ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.