ನರಸಿಂಹರಾಜಪುರಛಾಯಾಗ್ರಹಣ ಎಂಬುದು ಒಂದು ಪ್ರದೇಶದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಳಿಸುವ ಕಲೆ ಎಂದು ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಎಸ್ ಶೆಟ್ಟಿ ತಿಳಿಸಿದರು.

ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಮಲೆನಾಡ ಕ್ಲಿಕ್ ಉತ್ಸವ- 2026

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಛಾಯಾಗ್ರಹಣ ಎಂಬುದು ಒಂದು ಪ್ರದೇಶದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಳಿಸುವ ಕಲೆ ಎಂದು ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಎಸ್ ಶೆಟ್ಟಿ ತಿಳಿಸಿದರು.

ಭಾನುವಾರ ಬೈಪಾಸ್ ರಸ್ತೆಯ ಎಲ್.ಎಫ್.ಸ್ಪೋರ್ಟ್ಸ್ ಕ್ಲಬ್ ಹಾಲ್ ನಲ್ಲಿ ತಾಲೂಕು ಛಾಯಾಗ್ರಾಹಕರ ಸಂಘ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಲೆನಾಡ ಕ್ಲಿಕ್ ಉತ್ಸವ - 2026ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 1887 ರಲ್ಲಿ ಪ್ರಥಮ ಛಾಯಾಚಿತ್ರ ಜಗತ್ತಿನಲ್ಲಿ ಹೊರ ಬಂದಿದೆ.ಛಾಯಾಗ್ರಹಣ ಎಂಬುದು ಶಾಶ್ವತ ವಾದ ಒಂದು ಕಲೆ.

ಒಂದು ಪೋಟೋ ನಮ್ಮ ಭಾವನೆ ತಿಳಿಸುತ್ತದೆ. ಒಬ್ಬ ಛಾಯಾಗ್ರಾಹಕ ಸುಂದರವಾದ ಬೆಟ್ಟ, ನದಿ, ಪ್ರಕೃತಿ ಸೌಂದರ್ಯವನ್ನು ತನ್ನ ಕ್ಯಾಮರದಲ್ಲಿ ಸೆರೆ ಹಿಡಿಯುತ್ತಾರೆ. ಅದೇ ರೀತಿ ಮಲೆನಾಡು ಭಾಗದಲ್ಲಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು, ಅಡಕೆ ತೋಟಕ್ಕೆ ಕಾಣಿಸಿರುವ ರೋಗಗಳು ಸಹ ಕ್ಯಾಮರದಲ್ಲಿ ಸೆರೆಯಾಗಿ ಹೊರ ಜಗತ್ತಿಗೆ ಗೊತ್ತಾಗ ಬೇಕಾಗಿದೆ ಎಂದರು.

ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಯಚಂದ್ರ ಉದ್ಘಾಟಿಸಿ ಮಾತನಾಡಿ ಛಾಯಾಗ್ರಾಹಕರಿಗೆ ಯಾವುದೇ ಭದ್ರತೆ ಇಲ್ಲ. ಆದ್ದರಿಂದ ಸರ್ಕಾರ ಛಾಯಾಗ್ರಾಹಕ ಅಕಾಡೆಮಿ ಪ್ರಾರಂಭಿಸಿ ಛಾಯಾಗ್ರಾಹಕರ ಆರ್ಥಿಕ ನೆರವಿಗೆ ಬರಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಜಾತಿ, ಧರ್ಮ ಇದ್ದರೆ ಛಾಯಾಗ್ರಾಹಕರಲ್ಲಿ ಯಾವುದೇ ಜಾತಿ, ಧರ್ಮದ ಬೇಧ ಭಾವವಿಲ್ಲ. ಒಬ್ಬ ಛಾಯಾಗ್ರಾಹಕ ತೆಗೆದ ಒಂದು ಪೋಟೋ ಸಾವಿರ ಕಥೆ ಹೇಳುತ್ತದೆ. ಛಾಯಾಗ್ರಹಣ ಹಾಗೂ ಮಾದ್ಯಮ, ಪತ್ರಿಕೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸರ್ಕಾರದಿಂದ ಛಾಯಾಗ್ರಾಹಕರಿಗಾಗಿ ಆಸರೆ ಯೋಜನೆ ಪ್ರಾರಂಭವಾಗಿದೆ. ಯಾವುದೇ ಛಾಯಾಗ್ರಾಹಕ ಮೃತಪಟ್ಟರೆ ಈ ಯೋಜನೆಯಿಂದ ₹1 ಲಕ್ಷ ಪರಿಹಾರ ಸಿಗಲಿದೆ.ಛಾಯಾಗ್ರಾಹಕರ ಸಂಘಟನೆ ಅತಿ ಮುಖ್ಯ. ಪ್ರತಿ ವರ್ಷ ಆ.19 ರಂದು ವಿಶ್ವ ಛಾಯಾಗ್ರಾಹಕರ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರು.

ಸಭೆ ಅಧ್ಯಕ್ಷತೆಯನ್ನು ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪಿ.ಜೆ. ವಿಜು ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿದ್ದ ನೂರಲ್ ಹುದಾ ಅರಬ್ಬಿ ಮದ್ರಸಾ ದ ಧರ್ಮ ಗುರು ದಾವುದ್ ತೌಸಿಪ್ ರಜಾ ಅಜ್ಜಂ ಹಾಗೂ ಎಲ್.ಎಫ್. ಕ್ಯಾಥೆಡ್ಲಲ್ ಚರ್ಚ್ ನ ಧರ್ಮಗುರು ಫಾ. ಟಿನೋ ಥೋಮಸ್ ದಿವ್ಯ ಸಾನ್ನಿದ್ಯ ವಹಿಸಿ ಆಶೀರ್ವಾದ ನೀಡಿದರು.

ಇದೇ ಸಮಾರಂಭದಲ್ಲಿ ಛಾಯಾಗ್ರಾಹಕರ ಸಂಘದಿಂದ ಛಾಯಾಗ್ರಾಹಕರಾದ ಮಾಳೂರು ದಿಣ್ಣೆ ವಾಸು, ಬಾಳೆಹೊನ್ನೂರು ಪ್ರಶಾಂತ್ ಅವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಶಿವಮೊಗ್ಗ ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಕಾರರಿಂದ ರಕ್ತದಾನ ಶಿಬಿರ, ಎನ್.ಆರ್.ಪುರ ಎಸ್.ಎಲ್.ವಿ ಆಪ್ಟಿಕಲ್ಸ್ ನ ಯಶಸ್ವಿನಿ ಅ‍ವರ ನೇತೃತ್ವದಲ್ಲಿ ನೇತ್ರ ತಪಾಸಣೆ ನಡೆಯಿತು.ಛಾಯಾಗ್ರಾಹಕರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಾಜಿ ಅಧ್ಯಕ್ಷ ಪಿ.ಜೆ.ಆಂಟೋನಿ, ನಾಗಚಂದ್ರ ಪ್ರತಿಷ್ಠಾನ ಅಧ್ಯಕ್ಷ ಕಣಿವೆ ವಿನಯ, ಶಿವಮೊಗ್ಗ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಚಿಕ್ಕಮಗಳೂರು ಜಿಲ್ಲಾ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ದುರ್ಗೇಶ್, ತಾಲೂಕು ಛಾಯಾಗ್ರಾಹಕರ ಸಂಘದ ಸಮನ್ವಯ ಸಮಿತಿ ಅಧ್ಯಕ್ಷ ಸಿ.ಎಸ್.ಎಲಿಯಾಸ್,ಶಿ ವಮೊಗ್ಗ ರೆಡ್ ಕ್ರಾಸ್ ಸಂಸ್ಥೆ ಮುಖ್ಯಸ್ಥ ಮಂಜುನಾಥ್, ಅಜ್ಜಂಪುರ ತಾಲೂಕು ಛಾಯಾ ಸಂಘದ ಅಧ್ಯಕ್ಷ ಕಲ್ಲೇಶಪ್ಪ, ಚಿಕ್ಕಮಗಳೂರು ತಾಲೂಕು ಛಾಯಾ ಸಂಘದ ಅಧ್ಯಕ್ಷ ಶಿವು, ಅಜಯ್, ಅಭಿನವ ಗಿರಿರಾಜ್ ಇದ್ದರು.