30 ರಂದು ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ಅದ್ದೂರಿಯ ‘ಮಂಗಳೂರು ಕಂಬಳ’

| Published : Dec 29 2023, 01:32 AM IST

30 ರಂದು ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ಅದ್ದೂರಿಯ ‘ಮಂಗಳೂರು ಕಂಬಳ’
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಹೊರವಲಯದ ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ಡಿ.೩೦ರಂದು ಮಂಗಳೂರು ಕಂಬಳ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರದ ಹೊರವಲಯದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ-ಲಕ್ಷ್ಮಣ ಕೆರೆಯಲ್ಲಿ ಡಿ.30ರಂದು ‘ಮಂಗಳೂರು ಕಂಬಳ’ ಅದ್ದೂರಿಯಾಗಿ ನಡೆಯಲಿದೆ. ಇದರ ಅಂಗವಾಗಿ ಛಾಯಾಚಿತ್ರ ಸ್ಪರ್ಧೆ, ಕಲರ್ ಕೂಟ ಮತ್ತು ರೀಲ್ ಕಂಟೆಸ್ಟ್ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ.30ರಂದು ಬೆಳಗ್ಗೆ 8.30ಕ್ಕೆ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಕಂಬಳ ಉದ್ಘಾಟನೆಗೊಳ್ಳಲಿದೆ. ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಕಂಬಳ ಉದ್ಘಾಟನೆ ನೆರವೇರಿಸಲಿದ್ದಾರೆ. ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಕೆ. ಚಿತ್ತರಂಜನ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.

ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ, ಸ್ಪೀಕರ್ ಯು.ಟಿ. ಖಾದರ್, ಮುಖಂಡ ಸಿ.ಟಿ.ರವಿ, ಎಂ.ಆರ್.ಜಿ. ಗ್ರೂಪ್ ಚೇರ್ ಮೆನ್ ಕೆ.ಪ್ರಕಾಶ್ ಶೆಟ್ಟಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಎಲ್ಲ ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

6 ವಿಭಾಗಗಳಲ್ಲಿ ಸ್ಪರ್ಧೆ:

ಈ ಬಾರಿಯೂ ಕಂಬಳದಲ್ಲಿ ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ಹೀಗೆ 6 ವಿಭಾಗಗಳಲ್ಲಿ ಬಹುಮಾನ ನೀಡಲಾಗುವುದು, ಸುಮಾರು 150 ಜೊತೆ ಕೋಣಗಳು ಈ ಕಂಬಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕ್ಯಾ.ಬ್ರಿಜೇಶ್‌ ಚೌಟ ತಿಳಿಸಿದರು.ಕಂಬಳ ನಡೆಯುವುದು ಅನುಮಾನ ಎನ್ನುವಂತಹ ಸಂದರ್ಭದಲ್ಲಿ ಶುರುವಾಗಿರುವ ಮಂಗಳೂರು ಕಂಬಳ ಯಶಸ್ವಿಯಾಗುತ್ತಾ ಸಾಗಿದೆ. ಕಂಬಳದ ಬಗ್ಗೆ ವಿದ್ಯಾರ್ಥಿಗಳು, ಯುವಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ, ಈ ಬಾರಿ ಕೋಣಗಳನ್ನು ಕರೆಗೆ ಇಳಿಸುವುದಕ್ಕೆ ಟೈಮರ್ ಅಳವಡಿಕೆ ಮಾಡಿದ್ದು, 24 ಗಂಟೆಯೊಳಗಾಗಿ ಕಂಬಳ ಮುಗಿಸುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಮಿತಿಯ ಗೌರವ ಸಲಹೆಗಾರ ವಿಜಯ್ ಕುಮಾರ್ ಕಂಗಿನಮನೆ ವಿವರಿಸಿದರು.

ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯಗುತ್ತು, ಕೋಶಾಧಿಕಾರಿ ಪ್ರೀತಮ್ ರೈ, ಉಪಾಧ್ಯಕ್ಷ ಸಂಜಯ್ ಪ್ರಭು, ಅಜಿತ್ ಬೋಪಯ್ಯ, ಈಶ್ವರ್ ಪ್ರಸಾದ್ ಶೆಟ್ಟಿ ಇದ್ದರು.

ಕಂಬಳದ ಜನಪ್ರಿಯತೆ ಗಮನದಲ್ಲಿರಿಸಿಕೊಂಡು, ಯುವ ಜನತೆ ಕಂಬಳದತ್ತ ಹೆಚ್ಚು ಆಕರ್ಷಿತರಾಗುವಂತಾಗಲು ಕಂಬಳದ ಫೊಟೊಗ್ರಫಿ, ರೀಲ್ಸ್ ಸ್ಪರ್ಧೆ ಅಲ್ಲದೆ ದೊಡ್ಡವರು ಹಾಗೂ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.

ಡಿ.30 ರಂದು ನಡೆಯುವ ಚಿತ್ರಕಲಾ ಸ್ಪರ್ಧೆಯಲ್ಲಿ 10 ವರ್ಷ ವರೆಗಿನವರಿಗೆ, 10-15 ವರ್ಷ ವಯಸ್ಸಿನವರಿಗೆ ಹಾಗೂ ಮುಕ್ತ ವಿಭಾಗ ಇದೆ. ನೋಂದಣಿಗೆ: http:tiny.cc/6qljvz

ಫೊಟೊಗ್ರಫಿ ಆಸಕ್ತರಿಗಾಗಿ ಕಂಬಳದ ಫೊಟೊಗ್ರಫಿ ಹಾಗೂ ರೀಲ್ಸ್ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಫೊಟೊಗಳನ್ನು mangalurukambala@gmail.com ಇದಕ್ಕೆ ಕಳುಹಿಸಬೇಕು. ರೀಲ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು #MangaluruKambala7 ಅನ್ನು ಟ್ಯಾಗ್ ಮಾಡಬೇಕಾಗುತ್ತದೆ. ಕಂಬಳಕ್ಕೆ ಆಗಮಿಸುವ ಆಸಕ್ತರಿಗಾಗಿ ಗೋಲ್ಡ್‌ ಪಿಂಚ್‌ ಮೈದಾನದಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಹೊರ ಜಿಲ್ಲೆಗಳಿಂದ ಬಂದವರು, ಮಾಹಿತಿ ಇರದವರು ಸಾಮಾನ್ಯವಾಗಿ ಮಧ್ಯಾಹ್ನದ ವೇಳೆ ಕಂಬಳಕ್ಕೆ ಆಗಮಿಸುತ್ತಾರೆ. ಆದರೆ ಆಗ ವಿಶೇಷವೇನೂ ಇರುವುದಿಲ್ಲ, ಹಾಗಾಗಿ ರಾತ್ರಿ ವೇಳೆಗೆ ಕಂಬಳದ ನಿರ್ಣಾಯಕ ಓಟಗಳು ನಡೆಯುವುದರಿಂದ ಅದನ್ನು ಗಮನಿಸಿಕೊಳ್ಳಬೇಕು ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.