ಉತ್ತಮ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಅತ್ಯಗತ್ಯ

| Published : Dec 02 2024, 01:15 AM IST

ಉತ್ತಮ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಅತ್ಯಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆ, ದೈಹಿಕ ಚಟುವಟಿಕೆಗಳು ಪ್ರತಿಯೊಬ್ಬರ ಆರೋಗ್ಯಕ್ಕೂ ಪೂರಕವಾಗಿವೆ. ಕ್ರೀಡಾಭ್ಯಾಸವು ನಮ್ಮ ದೈಹಿಕ, ಮಾನಸಿಕ ಆರೋಗ್ಯಕ್ಕೂ ಸಹಕಾರಿ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024ಕ್ಕೆ ಚಾಲನೆ ನೀಡಿ ಡಿಸಿ ಗಂಗಾಧರ ಸ್ವಾಮಿ ಸಲಹೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕ್ರೀಡೆ, ದೈಹಿಕ ಚಟುವಟಿಕೆಗಳು ಪ್ರತಿಯೊಬ್ಬರ ಆರೋಗ್ಯಕ್ಕೂ ಪೂರಕವಾಗಿವೆ. ಕ್ರೀಡಾಭ್ಯಾಸವು ನಮ್ಮ ದೈಹಿಕ, ಮಾನಸಿಕ ಆರೋಗ್ಯಕ್ಕೂ ಸಹಕಾರಿ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ-2024 ಉದ್ಘಾಟಿಸಿ ಅವರು ಮಾತನಾಡಿದರು. ಆತ್ಮಬಲ, ಮನೋಸ್ಥೈರ್ಯ ಹೆಚ್ಚಿಸುವ ಜೊತೆಗೆ ಮಾನಸಿಕ, ದೈಹಿಕವಾಗಿ ನಮ್ಮನ್ನು ಬಲಪಡಿಸಲು ಕ್ರೀಡೆ ಸಹಕಾರಿ. ದೇಹ, ಮನಸ್ಸು, ಮಿದುಳು ಹಾಗೂ ನಾವು ಮಾಡುವ ಕೆಲಸಗಳು ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ. ನಿತ್ಯವೂ ನಡೆಯುವ, ಆಟವಾಡುವ ಹವ್ಯಾಸ ಇರುವವರು ಒಂದು ದಿನದ ಅಭ್ಯಾಸ, ಕ್ರೀಡಾ ಚಟುವಟಿಕೆ ತಪ್ಪಿದರೂ ಏನನ್ನೋ ಕಳೆದುಕೊಂಡಂತೆ ಚಡಪಡಿಸುತ್ತಾರೆ ಎಂದರು.

ಚಿಂತನಾಶೀಲತೆ, ಕ್ರಿಯಾಶೀಲತೆ ವೃದ್ಧಿ, ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆಗಳು ಸೇರಿದಂತೆ ದೈಹಿಕ ಚಟುವಟಿಕೆಗಳು ಸಹಕಾರಿಯಾಗಿವೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ವಾರ್ಷಿಕ ಕ್ರೀಡಾಕೂಟವು ಸಾಕಷ್ಟು ಸ್ಫೂರ್ತಿ ನೀಡುತ್ತದೆ. ಪೊಲೀಸ್ ಕ್ರೀಡಾಕೂಟದಲ್ಲಿ ಎಲ್ಲರೂ ಅತ್ಯಂತ ಶಿಸ್ತು, ಉತ್ಸಾಹ, ಶ್ರದ್ಧೆಯಿಂದ ಪಾಲ್ಗೊಂಡು, ಕ್ರೀಡೆಯ ಖುಷಿ ಅನುಭವಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ಮೂರು ದಿನಗಳ ಪೊಲೀಸ್ ಕ್ರೀಡಾಕೂಟದಲ್ಲಿ ಗೆದ್ದವರು ರಾಜ್ಯಮಟ್ಟದ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಅರ್ಹರು. ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಆರೋಗ್ಯ ಮಹತ್ವವಾಗಿದೆ. ಆದ್ದರಿಂದ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು, ಸ್ಪರ್ಧಾ ಮನೋಭಾವ ಮೂಡಿಸಲು ಹಾಗೂ ಸ್ಫೂರ್ತಿ ತುಂಬಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಸ್ಯಾಮ್ ವರ್ಗೀಸ್, ಡಿವೈಎಸ್ಪಿಗಳಾದ ಪಿ.ಬಿ.ಪ್ರಕಾಶ, ಬಿ.ಎಸ್. ಬಸವರಾಜ, ಮಲ್ಲೇಶ ದೊಡ್ಮನಿ , ವೃತ್ತ ನಿರೀಕ್ಷಕರಾದ ಲಕ್ಷ್ಮಣ ನಾಯ್ಕ, ಪದ್ಮಶ್ರೀ ಗುಂಜೇಕರ್, ಮಲ್ಲಮ್ಮ ಚೌಬೆ, ಇ.ವೈ. ಕಿರಣಕುಮಾರ, ಮಂಜುನಾಥ ನಲವಾಗಲು, ಸುನಿಲಕುಮಾರ, ವೈ.ಎಸ್.ಶಿಲ್ಪ, ಸುರೇಶ ಸಗರಿ, ಅಶ್ವಿನ್‌ ಕುಮಾರ, ಸುನಿಲ್ ಹುಲ್ಮನಿ, ರವಿ, ನಾಗರಾಜ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಇದ್ದರು. ದೇವರಾಜ ಸಂಗೇನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಎಎಸ್‌ಪಿ ಜಿ.ಮಂಜುನಾಥ ಯುವ ಕಾನ್‌ಸ್ಟೇಬಲ್‌ಗಳೂ ನಾಚುವಂತೆ ಗ್ರಾಮೀಣ ಕ್ರೀಡೆ ಕಬಡ್ಡಿ ಆಡುವ ಮೂಲಕ ಗಮನ ಸೆಳೆದರು.

- - - -27ಕೆಡಿವಿಜಿ13:

ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಪಾರಿವಾಳಗಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.