ಆರೋಗ್ಯಕರ ಜೀವನಕ್ಕೆ ದೈಹಿಕ, ಮಾನಸಿಕ ಸದೃಢತೆ ಅಗತ್ಯ: ನ್ಯಾ. ಮಹಾಂತೇಶ ಚೌಳಗಿ

| Published : Oct 11 2024, 11:45 PM IST

ಆರೋಗ್ಯಕರ ಜೀವನಕ್ಕೆ ದೈಹಿಕ, ಮಾನಸಿಕ ಸದೃಢತೆ ಅಗತ್ಯ: ನ್ಯಾ. ಮಹಾಂತೇಶ ಚೌಳಗಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರೂ ಆರೋಗ್ಯಕರ ಜೀವನ ಸಾಗಿಸಲು ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಬಹಳ ಮುಖ್ಯವಾಗಿದೆ

ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪ್ರತಿಯೊಬ್ಬರೂ ಆರೋಗ್ಯಕರ ಜೀವನ ಸಾಗಿಸಲು ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಬಹಳ ಮುಖ್ಯವಾಗಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ ಹೇಳಿದರು.

ಪಟ್ಟಣದ ತಾಲೂಕು ಆಸ್ಪತ್ರೆಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆಸ್ಪತ್ರೆಯ ಸಹಯೋಗದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್ಲರಿಗೂ ಕೆಲಸದ ಒತ್ತಡ, ಚಿಂತೆ, ಸಮಸ್ಯೆಗಳು ಇರುತ್ತವೆ. ಇವುಗಳು ಜೀವನದ ಒಂದು ಭಾಗಗಳಾಗಿವೆ. ಈ ಎಲ್ಲ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸಲು ಕಲಿಯಬೇಕು. ದಿನನಿತ್ಯ ಬೆಳಗ್ಗೆ ವ್ಯಾಯಾಮ, ಯೋಗ ಮಾಡಬೇಕು, ಆತ್ಮೀಯರೊಂದಿಗೆ ಮಾತನಾಡುವುದು, ಹಸಿರು ವಾತಾವರಣದಲ್ಲಿ ಕಾಲ ಕಳೆಯುವುದು, ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆ ಮಾಡಬೇಕು ಅಂದಾಗ ಮಾತ್ರ ಒತ್ತಡ ನಿಭಾಯಿಸಬಹುದಾಗಿದೆ ಎಂದರು.

ತಾಲೂಕಾಸ್ಪತ್ರೆಯ ವೈದ್ಯ ಡಾ. ಚಂದ್ರಕಾಂತ ದಂಡಿ ಉಪನ್ಯಾಸ ನೀಡಿ, ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಎಲ್ಲರೂ ಸಹಿತ ಮೊಬೈಲ್ ದಾಸರಾಗುತ್ತಿದ್ದು, ಸಾಮಾಜಿಕ ಜಾಲತಾಣಗಳನ್ನು ಉಪಯೋಗ ಮಾಡುವ ಮೂಲಕ ತಾಳ್ಮೆ ಜೊತೆಗೆ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪಾಲಕರು ಯಾವುದೇ ಕಾರಣಕ್ಕೂ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬಾರದು. ಸಾಮಾಜಿಕ ಜಾಲತಾಣದ ಬಳಕೆ ಕಡಿಮೆ ಮಾಡಬೇಕು ಎಂದರು.

ಪ್ರತಿ ತಿಂಗಳ 2ನೇ ಮಂಗಳವಾರ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ಜೊತೆಗೆ ಕೌನ್ಸೆಲಿಂಗ್ ಮಾಡಲಾಗುತ್ತದೆ. ಅಂತಹವರು ಆಸ್ಪತ್ರೆಗೆ ಆಗಮಿಸಿ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನ ಪಡೆದುಕೊಳ್ಳಬೇಕು. ಮಾನಸಿಕ ಕೆಲಸದ ಒತ್ತಡದ ಸಮಯದಲ್ಲಿ ಸಮಯಪ್ರಜ್ಞೆ ಬಹಳ ಮುಖ್ಯವಾಗಿದೆ. ಮಾನಸಿಕ ಆರೋಗ್ಯಕ್ಕೆ ರಾತ್ರಿ ಆಳವಾದ ನಿದ್ದೆ, ಉತ್ತಮ ಊಟ, ಸಮತೋಲಿತ ಆಹಾರ ಸೇವಿಸಿ, ಯೋಗ, ವ್ಯಾಯಾಮ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ರೋಗಗಳಿಂದ ದೂರವಿರಬಹುದು ಎಂದರು.

ಟಿಎಚ್ಓ ಡಾ. ಆನಂದ ಗೋಟೂರ ಮಾತನಾಡಿ, ಮಾನಸಿಕ ಅಸ್ವಸ್ಥರನ್ನು ಕಾಪಾಡುವುದು ಹಾಗೂ ರಕ್ಷಣೆ ಮಾಡುವುದು ಕೇವಲ ಅಧಿಕಾರಿಗಳ ಹೊಣೆಯಲ್ಲ. ನಮ್ಮ ಸುತ್ತಮುತ್ತಲಿನಲ್ಲಿ ಮಾನಸಿಕ ಅಸ್ವಸ್ಥರು ಕಂಡು ಬಂದರೆ ಅಂತವರನ್ನು ಗುರುತಿಸಿ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಸಮಾಜ ಸೇವಕರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ಎಸ್.ಜಿ. ಪಾಟೀಲ, ಅಪರ ಸರ್ಕಾರಿ ವಕೀಲ ಪರಸಪ್ಪ ಗುಜಮಾಗಡಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಾಲಾಜಿ ಬಳಿಗಾರ, ನ್ಯಾಯಾಲಯದ ಸಿಬ್ಬಂದಿ ಸುನೀಲ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.