ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ: ಬಿ.ಕೆ.ಸವಿತಕ್ಕ

| Published : Dec 25 2024, 12:45 AM IST

ಸಾರಾಂಶ

ಧ್ಯಾನವು ವ್ಯಕ್ತಿಯ ಮನಸ್ಸಿನ ತರಬೇತಿ ಅಥವಾ ಅರಿವಿನ ಒಂದು ಕ್ರಮವನ್ನು ಉಂಟು ಮಾಡುವ ಆಚರಣೆಯಾಗಿದೆ. ಧ್ಯಾನ ಎಂಬ ಪದವು ವಿವಿಧ ವಿಶಾಲ ಆಚರಣೆ ಸೂಚಿಸುತ್ತದೆ. ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವ ತಂತ್ರವಾಗಿದೆ. ಏಕಾಗ್ರತೆಯಿಂದ ಧ್ಯಾನ ಮಾಡಿದರೆ ಮನಸ್ಸಿನಲ್ಲಿ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಯೋಗಾಸನ ಹಾಗೂ ಪ್ರಾಣಾಯಾಮ ದೈಹಿಕ ಆರೋಗ್ಯ ಕೊಟ್ಟರೆ, ಧ್ಯಾನವು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಎಂದು ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ಮಹಾವಿದ್ಯಾಲಯದ ಬಿ.ಕೆ.ಸವಿತಕ್ಕ ಹೇಳಿದರು.

ತಾಲೂಕಿನ ಎಂ.ಹೊಸೂರು ಗೇಟ್ ಬಳಿಯ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದಲ್ಲಿ ಆಯೋಜಿಸಿದ್ದ ವಿಶ್ವ ಧ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಧ್ಯಾನವು ವ್ಯಕ್ತಿಯ ಮನಸ್ಸಿನ ತರಬೇತಿ ಅಥವಾ ಅರಿವಿನ ಒಂದು ಕ್ರಮವನ್ನು ಉಂಟು ಮಾಡುವ ಆಚರಣೆಯಾಗಿದೆ. ಧ್ಯಾನ ಎಂಬ ಪದವು ವಿವಿಧ ವಿಶಾಲ ಆಚರಣೆ ಸೂಚಿಸುತ್ತದೆ. ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವ ತಂತ್ರವಾಗಿದೆ. ಏಕಾಗ್ರತೆಯಿಂದ ಧ್ಯಾನ ಮಾಡಿದರೆ ಮನಸ್ಸಿನಲ್ಲಿ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ ಎಂದರು.

ಸಂಸ್ಥಾನದ ನೋಡಲ್ ಅಧಿಕಾರಿ ಡಾ.ಎಚ್.ಎಸ್.ವಾದಿರಾಜ್ ಮಾತನಾಡಿ, ಯೋಗ ಮತ್ತು ಧ್ಯಾನ ಮಾಡುವುದರಿಂದ ಮನುಷ್ಯನ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ದಿನನಿತ್ಯದ ತಮ್ಮ ಚಟುವಟಿಕೆ ಆರಂಭಿಸುವ ಮುನ್ನ ಯೋಗ ಮತ್ತು ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಬ್ರಹ್ಮಕುಮಾರಿ ಈಶ್ವರೀಯ ಮಹಾವಿದ್ಯಾಲಯದ ಬಿ.ಕೆ. ಪಾರ್ವತಕ್ಕ ಮಾತನಾಡಿದರು. ಸಂಸ್ಥಾನದ ಹಿರಿಯ ಸಂಶೋಧನಾಧಿಕಾರಿ ಡಾ. ಸಿಂಧುಶ್ರೀ ವಿಶ್ವ ಧ್ಯಾನ ದಿನಾಚರಣೆ ಹಾಗೂ ಸಂಸ್ಥೆ ಪರಿಚಯ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಅನುಸಂಧಾನ ಸಂಸ್ಥಾನದ ವಿವಿಧ ವಿಭಾಗಗಳ ವೈದ್ಯರಾದ ಡಾ. ನುಜಾತ್, ಡಾ.ಕಾರ್ತಿಕ್, ಡಾ.ಪೂಜಾ, ಯೋಗ ಚಿಕಿತ್ಸಕ ಸಿದ್ದಪ್ಪ ನರಗಟ್ಟಿ, ಸಿಬ್ಬಂದಿಗಳಾದ ನಾಗೇಶ್, ರಮ್ಯ, ಪ್ರಗತಿ, ಚೈತ್ರ, ಯಶ್ವಂತ್ ಸೇರಿದಂತೆ ನಾರಾರು ಮಂದಿ ಪಾಲ್ಗೊಂಡಿದ್ದರು.