ಸಾರಾಂಶ
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ಪ್ರತಿಯೊಬ್ಬರು ಗಮನ ಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಹನುಮಂತಪ್ಪ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಶ್ರೀ ರಾಮಕೃಷ್ಣ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ವಿಶ್ವ ದೃಷ್ಠಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ಆರೋಗ್ಯ ನಮ್ಮ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಯೋಗ ಕ್ಷೇಮ ಒಳಗೊಂಡಿದೆ. ನಾವು ಹೇಗೆ ಯೋಜಿಸುತ್ತೇವೆ, ಭಾವಿಸುತ್ತೇವೆ ಮತ್ತು ವರ್ತಿಸುತ್ತೇವೆ ಎಂಬುದರ ಮೇಲೆ ಇದು ಪರಿಣಾಮ ಬೀರುತ್ತದೆ. ನಾವು ಒತ್ತಡವನ್ನು ಹೇಗೆ ನಿರ್ವಹಿಸುತ್ತೇವೆ ಹಾಗೂ ಇತರರೊಂದಿಗಿನ ಸಂಬಂಧ ನಮ್ಮ ಮಾನಸಿಕ ಆರೋಗ್ಯ ನಿರ್ಧರಿಸುತ್ತದೆ ಎಂದರು.ವ್ಯಕ್ತಿಯ ಮಾನಸಿಕ ಅಸ್ವಸ್ಥತೆ ದೈಹಿಕ ಆರೋಗ್ಯಕ್ಕೂ ದುಷ್ಪರಿಣಾಮ ಬೀರುತ್ತದೆ. ಮೆದುಳಿನಲ್ಲಿ ಜೈವಿಕ ಅಂಶಗಳು ಅಥವಾ ರಾಸಾಯನಿಕ ಅಸಮ ತೋಲನ, ಮದ್ಯ ಅಥವಾ ಮಾದಕ ವಸ್ತುಗಳ ಸೇವನೆ, ಒಂಟಿತನ ಅಥವಾ ಪ್ರತ್ಯೇಕತೆ ಭಾವನೆ ಹೊಂದಿರುವುದು ಮಾನಸಿಕ ಒತ್ತಡಕ್ಕೆ ಕಾರಣ ಗಳಾಗಿದೆ. ಪ್ರಸ್ತುತ ಸಮಾಜದ ಯುವ ಜನತೆ ಹೆಚ್ಚಿನ ಮೊಬೈಲ್ ಬಳಕೆಯಿಂದ ತಮ್ಮ ದೃಷ್ಟಿ ದೋಷದೊಂದಿಗೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.ಮಾನಸಿಕವಾಗಿ ಅಸ್ವಸ್ಥರಾದ ವ್ಯಕ್ತಿ ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಮಾನಸಿಕ ಖಿನ್ನತೆ ಗೊಳಗಾಗುವ ವ್ಯಕ್ತಿ ಹಿತ ದೃಷ್ಟಿಯಿಂದ ಅನೇಕ ಕಾಯ್ದೆ ಕಾನೂನುಗಳು ಜಾರಿಯಾಗಿವೆ ಹಾಗೂ ತಮ್ಮ ಸಮಸ್ಯೆ ಹಂಚಿಕೊಳ್ಳಲು ಸರ್ಕಾರ 14416 ಟೋಲ್ ಫ್ರೀ ಸಂಖ್ಯೆ ಬಿಡುಗಡೆ ಮಾಡಿದೆ. ಜಿಲ್ಲಾ ಮಟ್ಟದಲ್ಲಿ ಮೆಂಟಲ್ ಹೆಲ್ತ್ ರಿಫ್ರೇಶ್ ಬೋರ್ಡ್ ತೆರೆದು ಮಾನಸಿಕ ಆರೋಗ್ಯದಿಂದ ಬಳಲು ತ್ತಿರುವ ವ್ಯಕ್ತಿಗಳ ಸಮಾಲೋಚನೆ ನಡೆಸಿ ಅವರು ಗುಣಮುಖರಾಗಲು ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್ ಮಾತನಾಡಿ, ಪ್ರತಿ ವ್ಯಕ್ತಿಗೂ ತನ್ನ ದೇಹದ ಎಲ್ಲಾ ಅಂಗಾಂಗಗಳನ್ನು ಸುರಕ್ಷಿತವಾಗಿರಿಸಿ ಕೊಳ್ಳುವುದು ಅವರ ಜವಾಬ್ದಾರಿ. ದೇಹದ ಒಂದು ಅಂಗಾಂಗ ವ್ಯತ್ಯಾಸವಾದರೂ ದೇಹದ ಅಸಮತೋಲನೆಗೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಪೋಷಕರು ಸೇರಿದಂತೆ ಯುವಜನತೆ ಹೆಚ್ಚಿನ ಮೊಬೈಲ್ ಬಳಕೆಯಿಂದ ಕಣ್ಣಿನ ದೃಷ್ಟಿದೋಷಗಳಿಗೆ ಕಾರಣವಾಗುತ್ತಿದೆ. ಮೊಬೈಲ್ ಎಷ್ಟು ಪೂರಕವೋ ಅಷ್ಟ ಮಾರಕ. ಅನಾವಶ್ಯಕವಾಗಿ ಮೊಬೈಲ್ ಬಳಕೆ ದೃಷ್ಟಿದೋಷ ಹಾಗೂ ಖಿನ್ನತೆಗೆ ಕಾರಣವಾಗುತ್ತದೆ. ಮೊಬೈಲ್ ಬಳಕೆ ಕಡಿಮೆ ಮಾಡಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರಿಸಿಕೊಂಡು ತಮ್ಮ ಮರಣದ ನಂತರ ಅಂಗಾಂಗಗಳನ್ನು ಇತರರಿಗೆ ದಾನ ಮಾಡಲು ಮುಂದಾಗಿ ಎಂದರು.ರಾಮಕೃಷ್ಣ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಎಚ್.ಎಸ್. ಉಮಾಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಟಿ.ಪಿ. ಬಾಲಕೃಷ್ಣ, ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ. ವಿನಯ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ ಉಪಸ್ಥಿತರಿದ್ದರು. 10 ಕೆಸಿಕೆಎಂ 5ಚಿಕ್ಕಮಗಳೂರಿನ ಶ್ರೀ ರಾಮಕೃಷ್ಣ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ವಿಶ್ವ ದೃಷ್ಠಿ ದಿನ ಕಾರ್ಯಕ್ರಮವನ್ನು ನ್ಯಾ. ಹನುಮಂತಪ್ಪ ಉದ್ಘಾಟಿಸಿದರು. ಡಾ. ಮೋಹನ್‌ಕುಮಾರ್, ಉಮಾಮಹೇಶ್ವರಯ್ಯ, ಡಾ. ವಿನಯ್ ಕುಮಾರ್ ಇದ್ದರು.