ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ದೈಹಿಕ ಶಿಕ್ಷಣ ಪೂರಕವಾಗಿದೆ ಎಂದು ನಗರಸಭೆ ಅಧ್ಯಕ್ಷರಾದ ಎಂ.ಚಂದ್ರೇಗೌಡ ತಿಳಿಸಿದರು.ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ ಹಾಸನ ಮತ್ತು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಇವರ ವತಿಯಿಂದ ನಗರದ ಕಲಾ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ಅಭ್ಯುದಿತ 2025ರ ರಾಜ್ಯಮಟ್ಟದ ಆಹ್ವಾನಿತ ಅಂತರ ಕಾಲೇಜು ಪುರುಷರ ವಾಲಿಬಾಲ್ ಮತ್ತು ಖೋ-ಖೋ ಪಂದ್ಯಾವಳಿಗೆ ಪಾರಿವಾಳವನ್ನು ಹಾರಿ ಬಿಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಈ ಹಿಂದೆ ಖಾಸಗಿ ಶಾಲೆಗಳಲ್ಲಿ ಅವಕಾಶ ಸಿಗದಿದ್ದರೆ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ದಾಖಲಾಗುವ ಪರಿಸ್ಥಿತಿ ಇತ್ತು. ಆದರೆ ಇದೀಗ ರಾಜ್ಯದಲ್ಲಿ ಆಳುವ ಸರ್ಕಾರಗಳು ಹಾಗೂ ಉತ್ತಮ ಅಧಿಕಾರಿಗಳು ಅದರ ದಿಕ್ಕನ್ನೇ ಬದಲಾಯಿಸಿ, ಸರ್ಕಾರಿ ಶಾಲೆಗಳಲ್ಲಿ ಅವಕಾಶ ಸಿಗದಿದ್ದಾಗ ಖಾಸಗಿ ಶಾಲೆಗಳಿಗೆ ತೆರಳುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ ಇದು ಶ್ಲಾಘನೀಯ ಎಂದರು ಸರ್ಕಾರಿ ಕಲಾ ಕಾಲೇಜು ಸಾವಿರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಕಲಾ ಕಾಲೇಜು ನುರಿತ ಉಪನ್ಯಾಸಕರ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು.ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಅದರ ಪಠ್ಯೇತರ ಚಟುವಟಿಕೆಗಳು ಸಹ ಬಹಳ ಪ್ರಮುಖವಾಗುತ್ತೆ. ಈ ನಿಟ್ಟಿನಲ್ಲಿ ಕ್ರೀಡೋತ್ಸವ ಪ್ರತಿವರ್ಷ ನಿರಂತರವಾಗಿ ನಡೆಯುತ್ತೆ. ಕ್ರೀಡಾ ವಿಭಾಗದಲ್ಲಿ ಒಂದು ಹೊಸ ಮುನ್ನುಡಿಯನ್ನು ಬರೆಯುವ ನಿಟ್ಟಿನಲ್ಲಿ ಸರ್ಕಾರಿ ಕಾಲೇಜುಗಳು ಮುನ್ನಡೆಯುತ್ತಿವೆ ಎಂದರು.ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಬಹಳ ಸಹಕಾರಿ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು. ಮುಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರ ಇನ್ನಷ್ಟು ಪ್ರಗತಿ ಸಾಧಿಸಲಿದೆ ಎಂದು ಭರವಸೆ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಇರ್ಷಾದ್ ಎಂ.ಬಿ. ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಜ್ಯಮಟ್ಟದ ವಾಲಿಬಾಲ್ ಮತ್ತು ಖೋ ಖೋ ಪಂದ್ಯಾವಳಿಯನ್ನು ನಮ್ಮ ಕಾಲೇಜಿನ ಅಧ್ಯಾಪಕರು ಆಡಳಿತ ವರ್ಗದವರು ಸರ್ವರೂ ಸಂಘಟಿಸಿ ಇವತ್ತು ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಈ ಕಾರ್ಯಕ್ರಮ ಬಹು ವರ್ಷದ ಕನಸಾಗಿದೆ. ಪ್ರಾದೇಶಿಕ ಜಂಟಿ ನಿರ್ದೇಶಕರು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನಮ್ಮ ಕಾಲೇಜು ಶಿಕ್ಷಣ ಇಲಾಖೆಯ ಆ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿಯನ್ನು ನಾವು ಕಾಣುತ್ತಿದ್ದೇವೆ. ಹಾಗೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ನಮ್ಮ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿಗಳ ಶ್ರೀಕಾಂತ್ ಬಹಳ ಸಹಕಾರ ನೀಡಿದ್ದಾರೆ ಎಂದರು.ನಮ್ಮ ಕಾಲೇಜು ಸರ್ವಾಂಗೀಣ ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಕಾಲೇಜಿಗೆ ಈ ಬಾರಿ ಸುವರ್ಣ ಯುಗ. ಏಕೆಂದರೆ ನಮ್ಮ ಕಾಲೇಜಿನ ತಂಡಗಳು ಎಲ್ಲಾ ಕಾಲೇಜುಗಳಿಂದ ಚಾಂಪಿಯನ್ ಟ್ರೋಫಿಗಳನ್ನು ತಂದಿದ್ದಾರೆ ಎಂದರು.ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಖೋ-ಖೋ ಕ್ರೀಡಾಪಟು ಚೈತ್ರ ಬಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಡಾ. ಶ್ರೀಕಾಂತ್ ಆರ್, ಪರೀಕ್ಷಾ ನಿಯಂತ್ರಕರಾದ ಡಾ.ಕೆ.ಡಿ. ಮುರುಳೀಧರ್, ಪತ್ರಾಂಕಿತ ವ್ಯವಸ್ಥಾಪಕರಾದ ಸತ್ಯಮೂರ್ತಿ ಕೆ.ಟಿ., ಕ್ರೀಡಾ ಸಮಿತಿ ಸಂಚಾಲಕರಾದ ಡಾ.ಪವನ್ ಜಿ.ಕೆ, ಕಾಲೇಜಿನ ಆಡಳಿತ ವಿಭಾಗದ ಸಿಬ್ಬಂದಿ, ಕಾಲೇಜಿನ ಎಲ್ಲಾ ವಿಭಾಗದ ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ವಿವಿಧ ಕಾಲೇಜುಗಳ ದೈಹಿಕ ನಿರ್ದೇಶಕರು ಉಪಸ್ಥಿತರಿದ್ದರು. ಕ್ರೀಡಾ ಸಮಿತಿಯ ಮೂಲಭೂತ ಸೌಕರ್ಯಗಳ ಸಮಿತಿಯ ಸಂಚಾಲಕರಾದ ಡಾ. ಪಾರ್ಥೇಶ್ ಕೆ.ವಿ. ಕಾರ್ಯಕ್ರಮದಲ್ಲಿ ಎಲ್ಲರನ್ನು ಸ್ವಾಗತಿಸಿ, ನಿರೂಪಿಸಿ ಮತ್ತು ವಂದಿಸಿದರು.
=============ಫೋಟೋ ಶೀರ್ಷಿಕೆ:ಹಾಸನ ನಗರದ ಕಲಾ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ಅಭ್ಯುದಿತ 2025ರ ರಾಜ್ಯಮಟ್ಟದ ಆಹ್ವಾನಿತ ಅಂತರ ಕಾಲೇಜು ಪುರುಷರ ವಾಲಿಬಾಲ್ ಮತ್ತು ಖೋ-ಖೋ ಪಂದ್ಯಾವಳಿಯನ್ನು ಗಣ್ಯರು ಉದ್ಘಾಟಿಸಿದರು.