ಭೌತಿಕ ಪ್ರಗತಿ ಮಾತ್ರವೇ ದೇಶದ ಪ್ರಗತಿ ಎನ್ನಲಾಗುವುದಿಲ್ಲ. ಶಿಕ್ಷಣ, ಆರೋಗ್ಯ, ಪರಿಸರ, ಸಾರ್ವಜನಿಕರ ಸಹಭಾಗಿತ್ವ ಇಂತಹ ಹತ್ತುಹಲವು ಮಹತ್ವದ ಸಂಗತಿಗಳು, ಸಮಸ್ಯೆ-ಸವಾಲುಗಳು ಹಾಗೂ ಪರಿಹಾರ ಕ್ರಮಗಳನ್ನು ಸ್ಥಳೀಯವಾಗಿ ಕ್ರೋಢೀಕರಿಸಿ, ಅದಕ್ಕೆ ಪೂರಕವಾಗಿ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದಲ್ಲಿ ಇದರ ವರದಿಯ ಆಧಾರದ ಮೇಲೆ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭೌತಿಕ ಪ್ರಗತಿ ಮಾತ್ರವೇ ದೇಶದ ಪ್ರಗತಿ ಎನ್ನಲಾಗುವುದಿಲ್ಲ. ಶಿಕ್ಷಣ, ಆರೋಗ್ಯ, ಪರಿಸರ, ಸಾರ್ವಜನಿಕರ ಸಹಭಾಗಿತ್ವ ಇಂತಹ ಹತ್ತುಹಲವು ಮಹತ್ವದ ಸಂಗತಿಗಳು, ಸಮಸ್ಯೆ-ಸವಾಲುಗಳು ಹಾಗೂ ಪರಿಹಾರ ಕ್ರಮಗಳನ್ನು ಸ್ಥಳೀಯವಾಗಿ ಕ್ರೋಢೀಕರಿಸಿ, ಅದಕ್ಕೆ ಪೂರಕವಾಗಿ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದಲ್ಲಿ ಇದರ ವರದಿಯ ಆಧಾರದ ಮೇಲೆ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಮಾನವ ಅಭಿವೃದ್ಧಿ-2025ರ ವರದಿ ಮತ್ತು ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-2031ರ ತಯಾರಿಕೆ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಪ್ರತಿ ಜಿಲ್ಲೆಗಳ ಅಭಿವೃದ್ಧಿ ಸೂಚ್ಯಂಕದಲ್ಲಿ ಸಾಮಾನ್ಯದಿಂದ ತೀವ್ರಪ್ರಮಾಣದ ಅಸಮತೋಲನವಿದೆ. ಯೋಜನೆಗಳನ್ನು ಸಿದ್ಧಪಡಿಸುವ ಮುನ್ನ, ಅಲ್ಲಿನ ಜನರ ಶಿಕ್ಷಣ, ಪರಿಸರ, ಆರೋಗ್ಯ, ನೈರ್ಮಲ್ಯ ಮತ್ತಿತರ ಅಗತ್ಯಗಳನ್ನು ಗುರುತಿಸುವುದರ ಜೊತೆಗೆ ಸ್ಥಳೀಯವಾಗಿರುವ ವಿವಿಧ ಇಲಾಖೆಗಳ ಇರಬಹುದಾದ ಚರಂಡಿ, ಬೀದಿದೀಪ ಮತ್ತಿತರ ಕೋರಿಕೆ ಮತ್ತು ಅಗತ್ಯ ಬೇಡಿಕೆಗಳನ್ನು ಕ್ರೋಡೀಕರಿಸಿ, ವರದಿ ಸಿದ್ಧಪಡಿಸಬೇಕಾಗುವುದು. ಅಲ್ಲದೇ ಕಳೆದ ದಶಕಗಳಿಂದೀಚೆಗೆ ಇಲಾಖಾ ಪ್ರಗತಿಯ ದತ್ತಾಂಶಗಳನ್ನು ಅವಲೋಕಿಸಿ, ಸಾಧಕ-ಬಾದಕಗಳನ್ನು ಪರಿಶೀಲಿಸಿ, ವರದಿ ಸಿದ್ಧಪಡಿಸುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ ಮಾತನಾಡಿ, ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳು ಹಾಗೂ ಸಾಧನೆಗಳ ಕುರಿತು ಏಪ್ರಿಲ್‌ ಮಾಹೆಯೊಳಗಾಗಿ ಅಧ್ಯಯನ ಕೈಗೊಳ್ಳಬೇಕು. ಜಿಲ್ಲಾ ಅಭಿವೃದ್ಧಿ ಯೋಜನೆ-೨೦೩೧ರ ವಲಯವಾರು ಅಧ್ಯಾಯಗಳನ್ನು ಸಿದ್ದಪಡಿಸಿ ಅನುಮೋದನೆ ಪಡೆದುಕೊಳ್ಳುವಂತೆ ಸೂಚಿಸಿದ ಅವರು, ಈ ವರದಿಯನ್ನು ಅಂತಿಮವಾಗಿ ಜೂನ್‌ ಮಾಹೆಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಗುವುದು. ಈ ವರದಿಯಲ್ಲಿ ಹಣಕಾಸು, ಅಪೌಷ್ಟಿಕತೆ ಮತ್ತು ಬಾಣಂತಿಯರ ಮರಣದಂತಹ ಸಮಸ್ಯೆಗಳು ಮಾತ್ರವಲ್ಲ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ವಿಷಯವನ್ನು ಪ್ರಮುಖವಾಗಿ ಪರಿಗಣಿಸಲಾಗುವುದು ಎಂದರು.

ಮಾನವ ಅಭಿವೃದ್ಧಿ ಸೂಚ್ಯಂಕ ದೇಶದ ಅಭಿವೃದ್ಧಿಯನ್ನು ಕೇವಲ ಆರ್ಥಿಕತೆಯಿಂದಷ್ಟೇ ಅಲ್ಲದೆ, ಜನರ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದ ಆಧಾರದ ಮೇಲೆ ಅಳೆಯುವ ಸಾಧನವಾಗಿದೆ. ಇದು ದೀರ್ಘಾಯುಷ್ಯ, ಶಿಕ್ಷಣ ಮತ್ತು ಆದಾಯದ ಸರಾಸರಿ ಸಾಧನೆಯನ್ನು ತೋರಿಸುತ್ತದೆ. ರಾಷ್ಟ್ರಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ ಹಾಗೂ ಸುಧಾರಣೆಗಾಗಿ ನೀತಿ ನಿರೂಪಣೆಗಳಿಗೆ ಪ್ರೇರಣೆ ನೀಡುತ್ತದೆ ಎಂದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಹಾಗೂ ಕರ್ನಾಟಕ ಸರ್ಕಾರ ಸಚಿವಾಲಯದ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಬಸವರಾಜ ಎಸ್.ಅವರು ಮಾತನಾಡಿ, ದಶಕಗಳ ಹಿಂದೆ ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳನ್ನು ಸಿದ್ಧಪಡಿಸಲಾಗಿತ್ತು. ಪ್ರಸ್ತುತ ವಿವಿಧ ವಲಯಗಳಡಿ ಉಂಟಾಗಿರುವ ಬದಲಾವಣೆಗಳು, ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಜಿಲ್ಲೆಗಳ ಸಮಸ್ಯೆಗಳು ಮತ್ತು ನಿವಾರಣಾ ಕ್ರಮಗಳು ಹಾಗೂ ಯಶೋಗಾಥೆಗಳನ್ನು ಒಳಗೊಂಡಂತೆ ಮಾನವ ಅಭಿವೃದ್ಧಿ ವರದಿ ತಯಾರಿಸುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕ್ರೋಡೀಕೃತ ವರದಿಯನ್ನು ಸಿದ್ಧಪಡಿಸಲು ತಾಂತ್ರಿಕ ಬೆಂಬಲ ಸಂಸ್ಥೆಯಾಗಿ ಕುವೆಂಪು ವಿಶ್ವವಿದ್ಯಾಲಯವನ್ನು ನೇಮಿಸಿ ಆದೇಶ ಹೊರಡಿಸಿದೆ ಎಂದರು.

ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.