ಸಾರಾಂಶ
ದೊಡ್ಡಬಳ್ಳಾಪುರದ ಭಗತ್ಸಿಂಗ್ ಕ್ರೀಡಾಂಗಣದ ಆಗಸದಲ್ಲಿ ಬಣ್ಣದ ಬಾನಾಡಿಗಳು ಬಿಡಿಸಿದ್ದ ರಂಗವಲ್ಲಿಯ ಚಿತ್ತಾರ ಕಣ್ಮನ ಸೂರೆಗೊಂಡಿತ್ತು. ಹತ್ತಾರು ರೂಪ, ವಿನ್ಯಾಸಗಳಿಂದ ಆಕರ್ಷಿಸುತ್ತಿದ್ದ ಗಾಳಿಪಟಗಳು ಬಾನಂಗಳಕ್ಕೆ ದಾಳಿಯಿಟ್ಟು ತಾ ಮುಂದು, ನಾ ಮುಂದು ಎಂಬಂತೆ ಮುಗಿಲೆತ್ತರಕ್ಕೆ ಹಾರುತ್ತಿದ್ದ ದೃಶ್ಯ ಕಾವ್ಯ ಗಮನ ಸೆಳೆಯಿತು.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರದ ಭಗತ್ಸಿಂಗ್ ಕ್ರೀಡಾಂಗಣದ ಆಗಸದಲ್ಲಿ ಬಣ್ಣದ ಬಾನಾಡಿಗಳು ಬಿಡಿಸಿದ್ದ ರಂಗವಲ್ಲಿಯ ಚಿತ್ತಾರ ಕಣ್ಮನ ಸೂರೆಗೊಂಡಿತ್ತು. ಹತ್ತಾರು ರೂಪ, ವಿನ್ಯಾಸಗಳಿಂದ ಆಕರ್ಷಿಸುತ್ತಿದ್ದ ಗಾಳಿಪಟಗಳು ಬಾನಂಗಳಕ್ಕೆ ದಾಳಿಯಿಟ್ಟು ತಾ ಮುಂದು, ನಾ ಮುಂದು ಎಂಬಂತೆ ಮುಗಿಲೆತ್ತರಕ್ಕೆ ಹಾರುತ್ತಿದ್ದ ದೃಶ್ಯ ಕಾವ್ಯ ಗಮನ ಸೆಳೆಯಿತು.ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಆಶ್ರಯದಲ್ಲಿ ನಡೆದ 17ನೇ ವರ್ಷದ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ತರಾವರಿ ವಿನ್ಯಾಸ, ವರ್ಣ ಮತ್ತು ಸಾಮಾಜಿಕ ಸಂದೇಶಗಳನ್ನು ಹೊತ್ತ ಬಾನಾಡಿಗಳು ರೆಕ್ಕೆ ಬಿಚ್ಚಿ ಹಾರಿದ್ದು ವಿಶೇಷ.
ಗ್ರಾಮೀಣ ಸೊಗಡಿನ ಆಕರ್ಷಕ ಗಾಳಿಪಟ ಸ್ಪರ್ಧೆ ರಾಜ್ಯದ ಮೂಲೆ ಮೂಲೆಯ ಜನರನ್ನ ತನ್ನತ್ತ ಸೆಳೆಯಿತು. ಪುರುಷರು, ಮಹಿಳೆಯರು ಮತ್ತು ಗುಂಪು ಸ್ಪರ್ಧೆಗಳು ನಡೆದವು. ಆಗಸದಲ್ಲಿ ಬಗೆಬಗೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ, ಅಚಾರ ವಿಚಾರಗಳ, ವಿಡಂಬನಾತ್ಮಕ ಸಂದೇಶಗಳನ್ನು ಹೊತ್ತ ಗಾಳಿಪಟಗಳು ರಾರಾಜಿಸಿ ನೆರೆದಿದ್ದ ಸಹಸ್ರಾರು ಜನರನ್ನು ರಂಜಿಸಿದವು.ಗಮನ ಸೆಳೆದ ತರಾವರಿ ಗಾಳಿಪಟ:
ಡಾ.ರಾಜ್‌ಕುಮಾರ್ ಲೆಜೆಂಡ್ಸ್ ಪಟ, ಅಂಜನೇಯ, ಬಜರಂಗಿ, ಅಂಬೇಡ್ಕರ್, ವಿವೇಕಾನಂದ, ಮೈಸೂರು ಅರಮನೆ, ಓಂಕಾರ, ಗೂಳಿ, ಬಸವೇಶ್ವರ, ಶ್ರೀರಾಮ, ಗರುಡಾ, ಕಾಳಿಮಾತೆ, ಆರ್‌ಸಿಬಿ ತಂಡದ ಗಾಳಿಪಟ, ಸೂರ್ಯಕಾಂತಿ, ಹಾವು, ನೇಗಿಲು ಹೊತ್ತ ರೈತ, ಗಣಪ, ಮಿಕ್ಕಿಮೌಸ್, ಗಂಡಬೇರುಂಡ, ವೀರಹನುಮಾನ್, ಹೂವು, ಗುಂಡುಪಟ ಜೊತೆಗೆ ದರ್ಶನ್, ಪುನಿತ್ ಮೊದಲಾದ ಚಿತ್ರನಟರ ಭಾವಚಿತ್ರ ಹೊತ್ತ ಪಟಗಳೂ ಹಾರಾಡಿದವು.12 ಅಡಿ ಎತ್ತರದ ಬೃಹತ್ ಆಂಜನೇಯ ಪಟ ವಿಶೇಷ ಆಕರ್ಷಣೆಯಾಗಿತ್ತು. ಸಮಕಾಲೀನ ವಿಚಾರಗಳನ್ನು ಬಿಂಬಿಸುವ ಗಾಳಿಪಟಗಳು ಕಣ್ಮನ ಸೆಳೆದವು. 29ಕೆಡಿಬಿಪಿ3-ದೊಡ್ಡಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆಗೆ ಶಾಸಕ ಧೀರಜ್ ಮುನಿರಾಜ್ ಗಾಳಿಪಟ ಹಾರಿಸುವ ಮೂಲಕ ಚಾಲನೆ ನೀಡಿದರು.
29ಕೆಡಿಬಿಪಿ4-ಗಮನ ಸೆಳೆದ ವಿವಿಧ ಸಂದೇಶಗಳನ್ನು ಹೊತ್ತ ತರಾವರಿ ಗಾಳಿಪಟಗಳು.
29ಕೆಡಿಬಿಪಿ5-ಗಾಳಿಪಟ ಸ್ಪರ್ಧೆಯಲ್ಲಿ ವಿಶಿಷ್ಟ ಗಾಳಿಪಟಗಳೊಂದಿಗೆ ಪಾಲ್ಗೊಂಡಿದ್ದ ಜನಸಮೂಹ.
29ಕೆಡಿಬಿಪಿ6-ಸ್ಪರ್ಧೆಯಲ್ಲಿ ಗಮನ ಸೆಳೆದ ರಾಮಾಂಜನೇಯ ಗಾಳಿಪಟ.