ಮಾಗಡಿ: ಬಡ ರೋಗಿಗಳಿಗೆ ಸಂಜೀವಿನಿ ಆಗಬೇಕಿದ್ದ ಸರ್ಕಾರಿ ಆಸ್ಪತ್ರೆಗೆ ಸೇರಿದ ಲಕ್ಷಾಂತರ ರುಪಾಯಿ ಮೌಲ್ಯದ ಮಾತ್ರೆಗಳನ್ನು ತಾಲೂಕಿನ ಅಜ್ಜನಹಳ್ಳಿ ಸಿದ್ದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಎಸೆದಿರುವ ರಾಶಿಗಳನ್ನು ಸರ್ಕಾರಿ ಅಧಿಕಾರಿಗಳ ತಂಡ ತನಿಖೆ ನಡೆಸಿತು
ಮಾಗಡಿ: ಬಡ ರೋಗಿಗಳಿಗೆ ಸಂಜೀವಿನಿ ಆಗಬೇಕಿದ್ದ ಸರ್ಕಾರಿ ಆಸ್ಪತ್ರೆಗೆ ಸೇರಿದ ಲಕ್ಷಾಂತರ ರುಪಾಯಿ ಮೌಲ್ಯದ ಮಾತ್ರೆಗಳನ್ನು ತಾಲೂಕಿನ ಅಜ್ಜನಹಳ್ಳಿ ಸಿದ್ದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಎಸೆದಿರುವ ರಾಶಿಗಳನ್ನು ಸರ್ಕಾರಿ ಅಧಿಕಾರಿಗಳ ತಂಡ ತನಿಖೆ ನಡೆಸಿತು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಸಮರ್ಪಕವಾಗಿ ದೊರೆಯದ ಬಿಪಿ, ಸಕ್ಕರೆ ಕಾಯಿಲೆ ಮಾತ್ರೆಗಳನ್ನು ಸಿದ್ದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ತಂದು ಸುರಿದಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ಮಾತ್ರೆಗಳ ಅವಧಿ ಸೆಪ್ಟೆಂಬರ್ 30ಕ್ಕೆ ಅವಧಿ ಮುಗಿದಿದ್ದು, ಇನ್ನೂ ಬಳಕೆಗೆ ಯೋಗ್ಯವಿರುವ ಔಷಧಗಳನ್ನು ಕಾನೂನುಬಾಹಿರವಾಗಿ ಅರಣ್ಯ ವ್ಯಾಪ್ತಿಯಲ್ಲಿ ತಂದು ಸುರಿಯಲಾಗಿದ್ದು, ಸ್ಥಳೀಯರು ಕಂಡು ಆಕ್ರೋಶ ಪಡಿಸಿದ್ದರು.ಪ್ರಗತಿಪರ ರೈತ ಜಿ.ಆರ್.ರಾಮಚಂದ್ರ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಬಿಪಿ, ಶುಗರ್ ಮಾತ್ರೆಗಳನ್ನು ಕೇಳಿದರೆ ಔಷಧಗಳ ಕೊರತೆ ಇದೆ ಎಂದು 10 ಮಾತ್ರೆ ಬರೆಯುವ ಜಾಗದಲ್ಲಿ ಕೇವಲ 5 ಮಾತ್ರೆ ಕೊಟ್ಟು ಕಳುಹಿಸುತ್ತಾರೆ. ಆದರೆ ಇಲ್ಲಿ ನೋಡಿದರೆ ಸೆಪ್ಟೆಂಬರ್ 30ಕ್ಕೆ ಅವಧಿ ಮುಗಿದ ಹಾಗೂ ಮುಗಿಯುವ ಹಂತದಲ್ಲಿದ್ದ ಔಷಧಗಳನ್ನು ದಾಸ್ತಾನು ಇಟ್ಟುಕೊಂಡು, ರೋಗಿಗಳಿಗೆ ಕೊಡದೆ ತಂದು ಕಸದಂತೆ ಸುರಿದು ಹೋಗಿದ್ದಾರೆ. ಸುಮಾರು 10-12 ದಿನಗಳ ಹಿಂದೆಯೇ ಇವುಗಳನ್ನು ತಂದು ಸುರಿಯಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗಳು ಗಂಭೀರ ತನಿಖೆ ನಡೆಸಿ, ನಿರ್ಲಕ್ಷ್ಯ ವಹಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಷ್ಟೇ ಅಲ್ಲದೆ, ಮಾಗಡಿ ಪಟ್ಟಣದಿಂದ ಕೊಳೆತ ಪ್ರಾಣಿಗಳ ಕಳೇಬರ ಹಾಗೂ ತ್ಯಾಜ್ಯಗಳನ್ನು ರಸ್ತೆಬದಿಯ ಅರಣ್ಯ ಪ್ರದೇಶದಲ್ಲಿ ತಂದು ಸುರಿಯುತ್ತಿದ್ದು, ಕೊಳೆತ ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.
ತಪ್ಪಿತತ್ಸರ ವಿರುದ್ಧ ಶಿಸ್ತುಕ್ರಮ:ತಾಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅವಧಿ ಮೀರಿದ ಔಷಧಿಗಳು, ಸಿರಿಂಜ್ ಹಾಗೂ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪ್ರತ್ಯೇಕ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಾರಕ್ಕೆ ಮೂರು ಬಾರಿ ಬಂದು ಅವರು ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಅಲ್ಲದೆ, ಅವಧಿ ಮುಗಿಯುವ ಮುನ್ನವೇ ಹೆಚ್ಚುವರಿ ಔಷಧಗಳನ್ನು ಜನರಲ್ ಆಸ್ಪತ್ರೆಗೆ ಅಥವಾ ಅಗತ್ಯವಿರುವ ಕಡೆಗೆ ವರ್ಗಾಯಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ. ಇಲ್ಲಿ ಪತ್ತೆಯಾಗಿರುವ ಔಷಧಿಗಳಲ್ಲಿ ಕರ್ನಾಟಕ ಸರ್ಕಾರದ ಸೀಲ್ ಇರುವ ಹಾಗೂ ಕೆಲವು ಖಾಸಗಿ ಔಷಧದ ಸ್ಟ್ರಿಪ್ಟ್‌ಗಳೂ ಇವೆ. ಇಲ್ಲಿ ಪತ್ತೆಯಾದ ಎಲ್ಲಾ ಮಾತ್ರೆಗಳನ್ನು ಜಪ್ತಿ ಮಾಡಿ, ಸೀಲ್ ಮಾಡಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೆ ಕಳುಹಿಸಲಾಗುವುದು. ಪ್ರತಿಯೊಂದು ಔಷಧದ ಮೇಲೂ ಬ್ಯಾಚ್ ನಂಬರ್ ಇರುತ್ತದೆ. ಈ ಬ್ಯಾಚ್ ನಂಬರ್ ಪರಿಶೀಲಿಸಿದರೆ ಇದು ಯಾವ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ ಅಥವಾ ಯಾವ ತಾಲೂಕಿನಿಂದ ಸರಬರಾಜಾಗಿತ್ತು ಎಂಬುದು ಕ್ಷಣಾರ್ಧದಲ್ಲಿ ತಿಳಿಯುತ್ತದೆ. ಜಿಲ್ಲಾ ಮಟ್ಟದ ತನಿಖಾ ತಂಡ ಹಾಗೂ ಡ್ರಗ್ ಕಂಟ್ರೋಲರ್ ಅವರ ಮೂಲಕ ಸಮಗ್ರ ತನಿಖೆ ನಡೆಸಿ, ಈ ಕೃತ್ಯ ಎಸಗಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳು ಹೇಳಿದರು.ಕಣ್ವ ನದಿ ಸೇರುವ ಅಪಾಯ: ಸಿದ್ದೇಶ್ವರ ಬೆಟ್ಟದ ಅರಣ್ಯ ಭಾಗದಲ್ಲಿ ಚಿರತೆ, ಕರಡಿ, ಮೊಲ ಸೇರಿದಂತೆ ಹಲವು ವನ್ಯಜೀವಿಗಳು ಮತ್ತು ಗ್ರಾಮಸ್ಥರ ಜಾನುವಾರು ಮೇವಿಗಾಗಿ ಓಡಾಡುತ್ತವೆ. ಮಳೆ ಬಂದರೆ ಈ ಔಷಧಿಗಳು ಕೊಚ್ಚಿ ಹೋಗಿ ನೇರ ಕಣ್ವ ನದಿ ಸೇರುತ್ತವೆ. ಇದರಿಂದ ನದಿ ನೀರು ಕಲುಷಿತಗೊಂಡು ಜಲಚರಗಳು ಸಾವನ್ನಪ್ಪುವ ಭೀತಿಯಿದೆ. ಜತೆಗೆ ಈ ನೀರನ್ನು ಕುಡಿಯುವ ಜಾನುವಾರುಗಳಿಗೆ ಮಾರಕ ರೋಗಗಳು ಹರಡುವ ಸಾಧ್ಯತೆಯಿದೆ. ರೋಗಪೀಡಿತ ಹಸುಗಳ ಹಾಲನ್ನು ಸೇವಿಸುವ ಜನರ ಆರೋಗ್ಯವೂ ಹದಗೆಡಲಿದೆ. ಇಲಾಖೆಯವರು ಕಣ್ಣುಮುಚ್ಚಿ ಕುಳಿತುಕೊಳ್ಳದೆ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.
ಸಾರ್ವಜನಿಕರ ಆಗ್ರಹ: ಕರ್ನಾಟಕ ಸರ್ಕಾರ ಮತ್ತು ಆರೋಗ್ಯ ಇಲಾಖೆ ಆರೋಗ್ಯ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಯತ್ನಿಸುತ್ತಿದ್ದರೂ, ಇಂತಹ ಬೇಜವಾಬ್ದಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದಾಗಿ ಬಡವರ ಆರೋಗ್ಯದ ಜತೆಗೆ ಅರಣ್ಯ ಪರಿಸರವೂ ನಾಶವಾಗುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.ಫೋಟೊ. ೦೧ ಎಂಜಿಡಿ ೦೧ & ೦೨: ಸಿದ್ದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಅಕ್ರಮ ವಿಲೇವಾರಿ ಮಾಡಿರುವ ಸರ್ಕಾರಿ ಔಷಧಿಗಳನ್ನು ಆರೋಗ್ಯ ಇಲಾಖೆಯವರು ತೆರವುಗೊಳಿಸಿದರು.