ಧರ್ಮಸಂರಕ್ಷಣಾ ರಥಗಳು ನಾಳೆ ಉಜಿರೆಗೆ

| Published : Oct 28 2023, 01:15 AM IST

ಸಾರಾಂಶ

ಧರ್ಮಸಂರಕ್ಷಣಾ ರಥಗಳು ನಾಳೆ ಉಜಿರೆಗೆ ಆಗಮನ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಕೊಲ್ಲೂರಿನಿಂದ ಶನಿವಾರ ಹೊರಡುವ ಧರ್ಮಸಂರಕ್ಷಣ ರಥ ಮತ್ತು ಮಂಗಳೂರಿನಿಂದ ಭಾನುವಾರ ಹೊರಡುವ ಧರ್ಮಸಂರಕ್ಷಣ ರಥಗಳು ಜೊತೆಯಾಗಿ ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಉಜಿರೆ ತಲುಪಲಿವೆ. ಅಪರಾಹ್ನ 3 ಗಂಟೆಗೆ ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಎರಡು ರಥಗಳೊಂದಿಗೆ ಸಾವಿರಾರು ಭಕ್ತರು, ಅಭಿಮಾನಿಗಳು ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ಹೋಗುವರು. ಅನೇಕ ಮಂದಿ ಮಠಾಧಿಪತಿಗಳು, ಸ್ವಾಮೀಜಿಯವರು, ಗಣ್ಯರು ಹಾಗೂ ಸರ್ವಧರ್ಮೀಯರೂ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಭಾನುವಾರ ಮಧ್ಯಾಹ್ನ ಉಜಿರೆಯಲ್ಲಿ ದೇವಸ್ಥಾನದ ವಠಾರದಲ್ಲಿ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ. ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ, ರಥಯಾತ್ರೆ, ಪಾದಯಾತ್ರೆ ಸಂಪನ್ನಗೊಳ್ಳುತ್ತದೆ. ಧರ್ಮಸಂರಕ್ಷಣೆಗಾಗಿ ನಡೆಯುವ ಸಾತ್ವಿಕ ಶಕ್ತಿಯ ಸಾತ್ವಿಕ ಹೋರಾಟ ಇದಾಗಿದ್ದು ‘ಹರಹರ ಮಹಾದೇವ’ ಎಂದು ಪಠಿಸುತ್ತಾ ಪಾದಯಾತ್ರೆ ನಡೆಯಲಿದೆ. ಧರ್ಮ ಸಂರಕ್ಷಣಾ ಯಾತ್ರೆಯ ವೇಳಾಪಟ್ಟಿ: ಅ.28 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ಪೂರ್ವಾಹ್ನ ಗಂಟೆ ೯.೩೦ ಕ್ಕೆ ಹೊರಟು ಧರ್ಮಸಂರಕ್ಷಣ ರಥ ಕುಂದಾಪುರ, ಉಡುಪಿ ಮೂಲಕ ಸಾಗಿ ಸಂಜೆ ಗಂಟೆ ೬.೩೦ ಕ್ಕೆ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ವಠಾರದಲ್ಲಿ ತಂಗುತ್ತದೆ. ಅ.29 ರಂದು ಬೆಳಗ್ಗೆ ೭ ಗಂಟೆಗೆ ಕದ್ರಿಯಿಂದ ಹೊರಡುವ ಇನ್ನೊಂದು ರಥದ ಜೊತೆ ಎರಡು ಧರ್ಮಸಂರಕ್ಷಣ ರಥಗಳು ಬಂಟ್ವಾಳ, ಮಡಂತ್ಯಾರು, ಬೆಳ್ತಂಗಡಿ ಮೂಲಕ ಮಧ್ಯಾಹ್ನ ಒಂದು ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ತಲುಪಲಿವೆ. ಅಲ್ಲಿಂದ 3 ಗಂಟೆಗೆ ಧರ್ಮಸಂರಕ್ಷಣ ಯಾತ್ರೆ ಮತ್ತು ಪಾದಯಾತ್ರೆ ಹೊರಟು ಸಂಜೆ ಐದು ಗಂಟೆಗೆ ಧರ್ಮಸ್ಥಳ ತಲುಪಲಿದೆ. ಬಸ್ರೂರು ಅಪ್ಪಣ್ಣ ಹೆಗ್ಡೆ ಧರ್ಮ ಸಂರಕ್ಷಣ ಯಾತ್ರಾ ಸಮಿತಿಯ ಗೌರವಾಧ್ಯಕ್ಷರಾಗಿದ್ದು ಸಂಚಾಲಕರಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಮತ್ತು ಧರ್ಮ ಜಾಗೃತಿ ಸಮಿತಿಯ ಸಂಚಾಲಕರಾಗಿ ಶಶಿಧರ ಶೆಟ್ಟಿ ನೇತೃತ್ವದಲ್ಲಿ ಸುಗಮ ಪಾದಯಾತ್ರೆಗೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ವಾಹನ ನಿಲುಗಡೆ ಬಗ್ಗೆ ಮಾಹಿತಿ: ಉಜಿರೆಯಲ್ಲಿ ಅಜ್ಜರಕಲ್ಲು ಮೈದಾನದಲ್ಲಿ ಕಾರು, ಜೀಪು, ಟೆಂಪೋಗಳಿಗೆ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಬಸ್ ಹಾಗೂ ಇತರ ವಾಹನಗಳು ಉಜಿರೆ ದೇವಸ್ಥಾನದ ಬಳಿ ಭಕ್ತಾದಿಗಳನ್ನು ಇಳಿಸಿ ಮಾರಿಗುಡಿಯ ಎದುರಿನ ಮಾರ್ಗದಲ್ಲಿ ಧರ್ಮಸ್ಥಳಕ್ಕೆ ಹೋಗಬೇಕು. ಅಲ್ಲಿ ಹೆಲಿಪ್ಯಾಡ್ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.