ಹಿಟ್‌ ಆ್ಯಂಡ್‌ ರನ್‌ಗೆ ಹಿಂಬದಿ ದ್ವಿಚಕ್ರ ವಾಹನದ ಸವಾರ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಿಟ್‌ ಆ್ಯಂಡ್‌ ರನ್‌ಗೆ ಹಿಂಬದಿ ದ್ವಿಚಕ್ರ ವಾಹನದ ಸವಾರ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯಪುರ ಮೂಲದ ರೋಹಿತ್‌ (20) ಮೃತ ಹಿಂಬದಿ ಸವಾರ. ಸವಾರ ಹರ್ಷ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎಲೆಕ್ಟ್ರಾನಿಕ್‌ ಸಿಟಿ ಫ್ಲೈ ಓವರ್‌ ಮೇಲೆ ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ರೋಹಿತ್‌ ಹಾಗೂ ಹರ್ಷ ವಿಜಯಪುರ ಮೂಲದವರಾಗಿದ್ದು, ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದಾರೆ. ಪೋರ್ಟರ್‌ನಲ್ಲಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದರು. ವಸ್ತುಗಳನ್ನು ಡಿಲಿವರಿ ಕೊಡಲು ಬೆಳಗ್ಗೆ 4 ಗಂಟೆಯ ಸುಮಾರಿಗೆ ರೋಹಿತ್‌ ಮತ್ತು ಹರ್ಷ ದ್ವಿಚಕ್ರ ವಾಹನದಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಫ್ಲೈ ಓವರ್‌ ಮೇಲೆ ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಅಪರಿಚಿತ ಗೂಡ್ಸ್‌ ವಾಹನವೊಂದು ಡಿಕ್ಕಿ ಹೊಡೆದಿದ್ದು, ಘಟನೆಯ ನಂತರ ಚಾಲಕ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.

ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ರೋಹಿತ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹರ್ಷನ ಕಾಲಿಗೆ ಗಂಭೀರವಾದ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಗೂಡ್ಸ್‌ ವಾಹನದ ಚಾಲಕನಿಗಾಗಿ ಶೋಧ ನಡೆಸಲಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.